ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಶಸ್ತ್ರಕ್ಕಿಲ್ಲದ ಶಕ್ತಿ ಶಾಸ್ತ್ರಕ್ಕಿದೆಯೆಂಬುದು ಬಹಳಷ್ಟು ಭಾರಿ ದೃಢಪಟ್ಟಿದ್ದು, ಇದಕ್ಕೆ ಜ್ವಲಂತ ಉದಾಹರಣೆ ಇತ್ತೀಚೆಗೆ ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ನಿರೂಪಿತವಾಗಿರುವುದನ್ನು ಕಂಡಿದ್ದೇವೆ ಎಂದು ದತ್ತಾವಧೂತ ಗೌರಿಗದ್ದೆ ವಿನಯ್ ಗುರೂಜಿ ಹೇಳಿದರು.ಅವರು ಭಾನುವಾರ ತಾಲೂಕಿನ ಯಗಟಿ ಗ್ರಾಮದ ಶ್ರೀ ವೀರನಾರಾಯಣಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ಶ್ರೀ ಕುಮಾರವ್ಯಾಸ ಜಯಂತಿ, ಶ್ರೀಅನ್ನಪೂರ್ಣ ಭೋಜನಶಾಲೆ ಹಾಗೂ ವ್ಯಾಸಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಸತ್ಪರಂಪರೆಯಲ್ಲಿ ಹುಟ್ಟಿದ ನಮಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಗೌರವ ಇರಬೇಕು. ಶ್ರೀ ರಾಮನ ಪೂಜೆಗಿಂತ ರಾಮನಂತೆ ಬದುಕುವುದನ್ನು ಕಲಿಯಿರಿ. ಶಸ್ತ್ರಕ್ಕಿಲ್ಲದ ಶಕ್ತಿ ಶಾಸ್ತ್ರಕ್ಕಿದೆಯೆಂಬುದು ಬಹಳಷ್ಟು ಭಾರಿ ದೃಢಪಟ್ಟಿದೆ. ಇದಕ್ಕೆ ಜ್ವಲಂತ ಉದಾಹರಣೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಯೋದ್ಯೆಯಲ್ಲಿ ನಿರೂಪಿಸಿದನ್ನು ಕಂಡಿದ್ದೇವೆ ಎಂದರು.ಮನಸ್ಸು ಮತ್ತು ವಾತಾವರಣ ಶುಚಿಯಾಗಿದ್ದರೆ ಒಳ ಮನಸ್ಸು ನಿರ್ಮಲವಾಗಿರುತ್ತದೆ. ಮನಸ್ಸನ್ನು ಸದಾ ನಿರ್ಮಲವಾಗಿಟ್ಟುಕೊಂಡು ಎಲ್ಲವನ್ನೂ ದಯಾಭಾವದಿಂದ ಕಂಡು ಸಮಾಜದ ಋಣ ತೀರಿಸಬೇಕು ಎಂದು ನುಡಿದರು. ಮಾಜಿ ಪ್ರಧಾನಿ ದೇವೇಗೌಡರು ಸೇರಿ ಅನೇಕ ರಾಜಕಾರಣಿಗಳು ನಮ್ಮಲ್ಲಿಗೆ ಬರುತ್ತಾರೆ ಎಂದ ಅವರು, ವೈ.ಎಸ್.ವಿ ದತ್ತ ಅವರಿಗೆ ಮುಂದಿನ ಒಳ್ಳೆಯ ದಿನಗಳು ಬರಲಿವೆ ಎಂದರು.ಶೃಂಗೇರಿ ಪೀಠದ ಮಾಜಿ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ಮಾತನಾಡಿ, ಕಾಲ ಕೆಟ್ಟಿದೆಯೆಂಬ ಮಾತು ಬರಲು ಕಾರಣ ಸತ್ಪುರುಷರ ಕೊರತೆಯಿರುವ ಸಮಾಜದಿಂದ, ಇತರರಿಗೆ ತೊಂದರೆ ನೀಡಿ ತಾವು ಸಂತಸ ಪಡುವವರೇ ಹೆಚ್ಚಿರುವುದರಿಂದ ಸಮಾಜ ಶೋಚನೀಯ ಪರಿಸ್ಥಿತಿಯಲ್ಲಿದೆ. ಧರ್ಮದ ಬಗ್ಗೆ ಅಭಿಮಾನವಿದೆ ಆದರೆ ಶ್ರದ್ಧೆಯಿಲ್ಲ. ಗುರುಗಳ ಬಗ್ಗೆ ಭಕ್ತಿ ಭಾವಗಳು ಕಡಿಮೆಯಾಗಿವೆ. ಎಲ್ಲ ಸೌಲಭ್ಯಗಳಿದ್ದರೂ ನೆಮ್ಮದಿಯಿಲ್ಲದ ಜೀವನ ನಮ್ಮದಾಗಿದೆ. ಧರ್ಮ ಜ್ಞಾನಿಯಾಗುತ್ತಿರುವ ಈ ಸಮಯದಲ್ಲಿ ಎಲ್ಲರೂ ಧರ್ಮಮಾರ್ಗದಲ್ಲಿ ನಡೆದು ಸಮಾನತೆ ಪ್ರಜ್ಞೆ ಮೆರೆಯಬೇಕಿದೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಗೆ ತರ್ಜುಮೆಯಾಗಿರುವ ಕುಮಾರವ್ಯಾಸ ಭಾರತವನ್ನು ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ವೈ.ಎಸ್.ವಿ.ದತ್ತ, ವೈ.ಎಸ್.ರವಿಪ್ರಕಾಶ್, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ಉಮಾ ವೆಂಕಟೇಶ್, ಶೃತಿ ರಾಘವೇಂದ್ರ, ದೇವಾಲಯದ ಟ್ರಸ್ಟ್‌ನ ಅಧ್ಯಕ್ಷ ಅನಂತರಾಮಯ್ಯ, ಕಾರ್ಯದರ್ಶಿ ವೈ.ಟಿ ರಮೇಶ್, ಮುಖಂಡರಾದ ಬಿದರೆ ಜಗದೀಶ್, ಪ್ರೇಮ್ ಕುಮಾರ್, ರಘುರಾಮ್, ಸಿ.ಕೆ. ಮಂಜುನಾಥ್, ಸತೀಶ್ ಹಾಗೂ ಯಗಟಿ ಒಂಭತ್ತು ದೊಡ್ಡಿ ಗೌಡರು ಇದ್ದರು.ಚಿಕ್ಕಮಗಳೂರಿನಲ್ಲಿ ಎಸ್‌ಪಿಯಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈರವರು ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಗುರೂಜಿ ಭವಿಷ್ಯ ನುಡಿದರು. ನಿಮ್ಮಿಂದ ತಮಿಳುನಾಡಿನಲ್ಲಿ ಧರ್ಮ ಬೆಳೆಯುತ್ತದೆ ನೀವು ತಿರುವಣ್ಣಾಮಲೈ ದೇವಾಲಯಕ್ಕೆ ಆಗಾಗ ಭೇಟಿ ಕೊಡುತ್ತಿರಿ ಎಂದು ಅಣ್ಣಾಮಲೈ ಅವರಿಗೆ ಹೇಳಿದ್ದಾಗಿ ಗುರೂಜಿ ಸಭೆಯಲ್ಲಿ ತಿಳಿಸಿದರು.
ಕುಮಾರವ್ಯಾಸ ಭಾರತ ವಾಚನ ಮತ್ತು ವ್ಯಾಖ್ಯಾನದಲ್ಲಿ ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾ ಮಂಜರಿ ಭೀಷ್ಮ ಪರ್ವದ ಪ್ರಸಂಗಗಳನ್ನು ಆಧರಿಸಿ ನಡೆದ ಗಮಕ ವಾಚನ- ವ್ಯಾಖ್ಯಾನದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ವ್ಯಾಖ್ಯಾನ ನೀಡಿ ಮಾತನಾಡಿದರು. ಕುಮಾರವ್ಯಾಸ ಭಾರತದಲ್ಲಿನ ರಾಜಕೀಯ ವಿವರಣೆಗಳನ್ನು ಪ್ರಸ್ತುತ ಕಾಲದ ರಾಜಕೀಯಕ್ಕೆ ಹೋಲಿಸಿ ಮಾಡಿದ ವ್ಯಾಖ್ಯಾನ ಮಹಾಕಾವ್ಯದ ಪ್ರಸ್ತುತತೆ ವಿವರಿಸಿತು.ಮಹಾಭಾರತದ ಯುದ್ಧಾರಂಭ ಸಮಯದಲ್ಲಿ ಎರಡೂ ಪಕ್ಷಗಳ ಬಲಾಬಲದ ಲೆಕ್ಕಾಚಾರವನ್ನು ಇಂದಿನ ಎನ್.ಡಿ.ಎ ಮತ್ತು ಇಂಡಿಯಾ ಒಕ್ಕೂಟದ ಬಲಾಬಲ, ನಾಯಕತ್ವದ ಲೆಕ್ಕಾಚಾರಕ್ಕೆ ಹೋಲಿಸಿ ನೀಡಿದ ವಿವರಣೆ ಹಾಗೂ ಜೆಡಿಎಸ್ ಪಾತ್ರವನ್ನು ಭೀಷ್ಮಪರ್ವಕ್ಕೆ ವ್ಯಾಖ್ಯಾನಿಸಿ ಹೇಳುತ್ತಿದ್ದಂತೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಮತ್ತೂರಿನ ಪ್ರಸಾದ್ ಭಾರದ್ವಾಜ್ ಗಮಕ ವಾಚನ ಮಾಡಿದರು.