ಕಾರ್ಮಿಕ ವಿರೋಧಿ ನೀತಿ ಕೈಬಿಟ್ಟು, ಸಮಸ್ಯೆಗಳ ಪರಿಹರಿಸಿ

| Published : May 21 2025, 02:25 AM IST

ಸಾರಾಂಶ

ದೇಶದ ಕಾರ್ಮಿಕರು ಮತ್ತಿತರ ದುಡಿಯುವ ವರ್ಗಗಳ ವಿರೋಧಿ ನೀತಿಗಳನ್ನು ಕೈಬಿಟ್ಟು, ಅಂತಹವರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಎಐಯುಟಿಯುಸಿ ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಬೆಂಬಲಿಸಿ, ಮುಷ್ಕರದಲ್ಲಿ ಪಾಲ್ಗೊಂಡಿತು.

- ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರಧಾನಿ, ಸಿಎಂಗೆ ಆಶಾಗಳ ನಿಯೋಗ ಮನವಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶದ ಕಾರ್ಮಿಕರು ಮತ್ತಿತರ ದುಡಿಯುವ ವರ್ಗಗಳ ವಿರೋಧಿ ನೀತಿಗಳನ್ನು ಕೈಬಿಟ್ಟು, ಅಂತಹವರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಎಐಯುಟಿಯುಸಿ ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಬೆಂಬಲಿಸಿ, ಮುಷ್ಕರದಲ್ಲಿ ಪಾಲ್ಗೊಂಡಿತು.

ನಗರದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಮುಖಾಂತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾಗಳ ನಿಯೋಗ ಮೂಲಕ ಪ್ರಧಾನಿ, ಸಿಎಂಗೆ ಮನವಿ ಅರ್ಪಿಸಲಾಯಿತು.

ಸಂಘಟನೆ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರ ಆಶಾಗಳ ಗೌರವಧನ, ಪ್ರೋತ್ಸಾಹಧನ ಹೆಚ್ಚಿಸಬೇಕು. ರಾಜ್ಯ ಸರ್ಕಾರ ಭರವಸೆ ನೀಡಿರುವಂತೆ ಎಲ್ಲ ಕಾರ್ಯಕರ್ತೆಯರಿಗೆ ಮಾಸಿಕ ₹10 ಸಾವಿರ ಗೌರವಧನ ನೀಡಬೇಕು. ಕೇಂದ್ರದಲ್ಲಿ ಈಚಿನ ಪಾರ್ಲಿಮೆಂಟ್‌ ಅಧಿವೇಶನದ ವೇಳೆ ಕೇಂದ್ರ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರಿಗೆ ಹೇಳಿದಂತೆ ಪ್ರೋತ್ಸಾಹಧನ ಹೆಚ್ಚಿಸಬೇಕು ಎಂದರು.

ಆಶಾ, ಆಂಗನವಾಡಿ, ಬಿಸಿಯೂಟ ಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ ₹36 ಸಾವಿರ ನಿಗದಿಪಡಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ತುರ್ತುಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆ-2023 ಹಿಂಪಡೆಯಬೇಕು. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಕೆಲಸದ ಅವಧಿಯನ್ನು ಪ್ರಸ್ತುತದಲ್ಲಿರುವ ದಿನಕ್ಕೆ 8 ಗಂಟೆ ಮತ್ತು ವಾರಕ್ಕೆ 48 ಗಂಟೆ ಮಿತಿ ಖಾತ್ರಿಗೊಳಿಸಬೇಕು. ಮಹಿಳೆಯರಿಗೆ ರಾತ್ರಿಪಾಳಿ ಅವಕಾಶ ನೀಡುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ವಿರೋಧಿ ಬಂಡವಾಳಶಾಹಿಗಳ ಪರ 4 ಕಾರ್ಮಿಕ ಕಾಯ್ದೆ ರದ್ದುಪಡಿಸಬೇಕು. ಎಲ್ಲ ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ, ಸಾಮಾಜಿಕ ಭದ್ರತೆ ಸವಲತ್ತುಗಳನ್ನು ಖಾತ್ರಿಪಡಿಸಬೇಕು. ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಉದ್ಯೋಗದ ಹಕ್ಕನ್ನು ಮೂಲಭೂತ ಸಾಂವಿಧಾನಿಕ ಹಕ್ಕನ್ನಾಗಿ ಮಾಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಅರ್ಪಿಸಲಾಯಿತು.

ಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಜಿಲ್ಲಾಧ್ಯಕ್ಷೆ ಲಲಿತಮ್ಮ, ಮುಖಂಡರಾದ ನೇತ್ರಾ ಕಕ್ಕರಗೊಳ್ಳ, ಶಿಲ್ಪಾ ತುರ್ಚಘಟ್ಟ, ತಿಪ್ಪಮ್ಮ, ಹನುಮಕ್ಕ ಇತರರು ನಿಯೋಗದಲ್ಲಿದ್ದರು.

- - - -20ಕೆಡಿವಿಜಿ16.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮಂಜುನಾಥ ಕುಕ್ಕವಾಡ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಅರ್ಪಿಸಿತು.