ಸಾರಾಂಶ
ಭಾರತೀಯರಲ್ಲಿ ಸೇವಾ ಮನೋಭಾವ, ತ್ಯಾಗಗುಣ ರಕ್ತಗತವಾಗಿ ಬಂದಿದೆ.
ಹೊಸಪೇಟೆ: ನಾವೆಲ್ಲರೂ ಅಹಂಕಾರ ತ್ಯಜಿಸಿ, ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಶ್ರೀ ಹಂಸಾಂಬ ಶಾರದಾಶ್ರಮದ ನೂತನ ನಿವೇಶನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಭಾರತೀಯರಲ್ಲಿ ಸೇವಾ ಮನೋಭಾವ, ತ್ಯಾಗಗುಣ ರಕ್ತಗತವಾಗಿ ಬಂದಿದೆ. ಆದರೆ, ಕೊಂಚ ಅಹಂ ಇದೆ. ನಾವೆಲ್ಲರೂ ಅಂಹಕಾರ ತ್ಯಾಗ ಮಾಡಬೇಕಿದೆ. ಸತ್ಸಂಗಗಳಲ್ಲಿ ಭಾಗವಹಿಸುವ ಮೂಲಕ ಆಧ್ಯಾತ್ಮಿಕ ಚಿಂತನೆ, ಭಕ್ತಿ ಮಾರ್ಗದಲ್ಲಿ ನಡೆಯಬಹುದು. ಇದರಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದರು.ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಮುಂದಿನ ದಿನದಲ್ಲಿ ಹಸಾಂಬ ಶಾರದಾಶ್ರಮದಲ್ಲಿ ಶಾಲೆ ತೆರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಎಲ್ಲಾ ಸಹಕಾರವನ್ನು ತಾವು ಮಾಡುವುದಾಗಿ ಭರವಸೆ ನೀಡಿದ ಅವರು, ಆಶ್ರಮಕ್ಕೆ ವೈಯಕ್ತಿಕ ಐದು ಲಕ್ಷ ರು. ದೇಣಿಗೆ ಘೋಷಿಸಿದರು.
ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಪಾಠ ಕಲಿಸಬೇಕಿದೆ. ಅವರಿಗೆ ಕಷ್ಟಗಳನ್ನು ಸಹಿಸುವ ಟ್ರೇನಿಂಗ್ ನೀಡಬೇಕಿದೆ. ಅವರು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುವ ರೀತಿಯಲ್ಲಿ ಅವರಿಗೆ ತರಬೇತಿ ನೀಡುವುದು ಅಗತ್ಯ ಇದೆ. ಈ ನಿಟ್ಟಿನಲ್ಲಿ ಈ ಜಾಗದಲ್ಲಿ ತಲೆ ಎತ್ತಲಿರುವ ಹಸಾಂಬ ಶಾರದಾಶ್ರಮ ಬಹುದೊಡ್ಡ ಆಶ್ರಮವಾಗಿ ಬೆಳೆಯಲಿದೆ. ಈ ಆಶ್ರಮವನ್ನು ಬೆಳೆಸುವ ಮಹಾತ್ಕಾರ್ಯ ಈ ಭಾಗದ ಜನರ ಮೇಲಿದೆ ಎಂದರು.ಕಿರ್ಲೋಸ್ಕರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಮಾತನಾಡಿದರು.
ಹುಬ್ಬಳ್ಳಿಯ ದತ್ತಾವಧೂತರು, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದಜಿ, ರಾಣೆಬೆನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜೀ, ವಿಜಯಪುರದ ಕೃಪಾಮಯಿ ಶಾರದಾಶ್ರಮದ ಮಾತಾ ಕೈವಲ್ಯಮಯಿ ಆಶೀರ್ವಚನ ನೀಡಿದರು. ಕಮಲಾ ಗುಮಾಸ್ತೆ ಇತರರಿದ್ದರು. ಮಾತಾ ಪ್ರಬೋದಾಮಯಿ ದಾನಿಗಳಿಗೆ ಸನ್ಮಾನ ಕಾರ್ಯ ನಡೆಸಿಕೊಟ್ಟರು.ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ, ನಿರ್ಭಯಾನಂದ ಸ್ವಾಮಿಜಿ ಅವರ ನೇತೃತ್ವದಲ್ಲಿ ನಿವೇಶನದ ಪೂಜೆ ಅಂಗವಾಗಿ ಗುರುವಾರ ಭೂ ವರಾಹ ಹೋಮ ಕಾರ್ಯ ನೆರವೇರಿಸುವ ಮೂಲಕ ಜಾಗಕ್ಕೆ ಶಾಂತಿ ಕೋರಲಾಯಿತು.