ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಾಲಾ ಮಾನ್ಯತೆ ನವೀಕರಣ ಸೇರಿದಂತೆ ಸರ್ಕಾರ ಹೇರಿರುವ ನಿಬಂಧನೆಗಳನ್ನು ಖಂಡಿಸಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಭಾರಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಾಲಾ ಮಾನ್ಯತೆ ನವೀಕರಣ ಸೇರಿದಂತೆ ಸರ್ಕಾರ ಹೇರಿರುವ ನಿಬಂಧನೆಗಳನ್ನು ಖಂಡಿಸಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಭಾರಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಮೋನಾರೋತ್ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಶಾಲೆಗಳಿಗೆ ಭೂ ಪರಿವರ್ತನೆ ನಿಯಮವನ್ನು ಸಂಪೂರ್ಣವಾಗಿ ಕೈಬಿಡಬೇಕು, ಹಣ ಕ್ರೋಡಿಕರಿಸುವ ನಿಟ್ಟಿನಲ್ಲಿ ಶಾಲೆಗಳಿಂದ ತೆರಿಗೆ ಸೆಸ್ ತೆರಿಗೆ ಭೂ ಪರಿವರ್ತನೆ ಶುಲ್ಕ ವಿಧಿಸಿದ್ದಾರೆ ಎಂದರು.ಕೋರ್ಟ್‌ನ ಇತ್ತೀಚಿನ ಆದೇಶದಂತೆ ೧೫ ಮೀಟರ್‌ಗಿಂತ ಕಡಿಮೆ ಎತ್ತರದ ಕಟ್ಟಡಗಳಿಗೆ ಸರಳ ಆಗ್ನಿ ಸುರಕ್ಷತಾ ನಿಯಮಗಳನ್ನು ಅನ್ವಯಿಸಬೇಕು ಎಂದು ಹೇಳಿದ್ದರೂ ಅದನ್ನು ಕಡೆಗಣಿಸಿ ಇಲ್ಲಸಲ್ಲದ ನಿಬಂಧನೆಗಳನ್ನು ಹೇರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಏಕಗವಕ್ಷಿ ಯೋಜನೆಯಡಿ ಜಾರಿಗೆ ತರಬೇಕು.ಎಲ್ಲಾ ಶಾಲೆಗಳಿಗೂ ಮಾನ್ಯತೆ ನವೀಕರಣವನ್ನು ಕನಿಷ್ಠ ೧೦ ವರ್ಷಗಳ ಅವಧಿಗೆ ನೀಡಬೇಕು.ಆರ್.ಟಿ.ಇ ಯೋಜನೆಯಡಿ ಬಾಕಿ ಇರುವ ಸಂಪೂರ್ಣ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರುಪ್ಷಾ ರಾಜ್ಯಾಧ್ಯಕ್ಷ ಲೇಪಾಕ್ಷಿ, ಗೌರವ ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಂ.ಎಲ್. ಜಿ ಲಿಂಗರಾಜು, ಗೌರವಾಧ್ಯಕ್ಷ ಬಾಲಸುಬ್ರಹ್ಮಣ್ಯಂ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಮೋಹನ ಕುಮಾರ್, ನಿಕಟಪೂರ್ವ ಅಧ್ಯಕ್ಷ ನಂಜುಂಡಸ್ವಾಮಿ, ಗಂಗಾಧರ್, ಮಲ್ಲಕಾರ್ಜುನಸ್ವಾಮಿ, ವಾಸುದೇವರಾವ್,ಕಾರ್ಯದರ್ಶಿ ಮಹೇಶ್, ರವಿ, ಆರ್.ಪಿ.ನಂಜುಂಡಸ್ವಾಮಿ, ಆಶಾ, ಲತಾ, ಮೋಹನ್, ಸುನೀಲ್, ಸುರೇಶ್ ನಾಯ್ಡು ಜಿಲ್ಲೆಯ ಖಾಸಗಿ ಶಾಲೆಯ ಮುಖ್ಯಸ್ಥ ರು, ಶಿಕ್ಷಕರು ಭಾಗವಹಿಸಿದ್ದರು.