ಹುಬ್ಬಳ್ಳಿ:
“ಸಮಾನಾಂತರ ವಿದ್ಯುತ್ ವಿತರಣಾ ಲೈಸೆನ್ಸ್ " ಹೆಸರಿನಲ್ಲಿ ಖಾಸಗಿ ವಿದ್ಯುತ್ ವಿತರಣಾ ಪ್ರವೇಶ ಪಡೆಯಲು ಮುಂದಾಗಿರುವ ಕ್ರಮ ಖಂಡಿಸಿ ರೈತಸೇನಾ ಕರ್ನಾಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಟಾಟಾ ಪವರ್ ಕಂಪನಿ ಲಿಮಿಟೆಡ್ ಸಂಸ್ಥೆಯು “ಸಮಾನಾಂತರ ವಿದ್ಯುತ್ ವಿತರಣಾ ಲೈಸೆನ್ಸ್ " ಹೆಸರಿನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ವಿದ್ಯುತ್ ವಿತರಣಾ ಪ್ರವೇಶ ಪಡೆಯಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಅರ್ಜಿ ಸಲ್ಲಿಸಿದೆ. ಇದು ರಾಜ್ಯದ ಸಾರ್ವಜನಿಕ ಹಿತಾಸಕ್ತಿ, ಸಾಮಾಜಿಕ ನ್ಯಾಯ ಹಾಗೂ ಸಾರ್ವಜನಿಕ ವಲಯದ ಭದ್ರತೆ ಕುರಿತಂತೆ ಗಂಭೀರ ಆತಂಕ ಹುಟ್ಟುಹಾಕಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಎಂಬುದು ಕೇವಲ ವ್ಯಾಪಾರಿಕ ವಸ್ತುವಲ್ಲ. ಅದು ರೈತರ ಬದುಕು, ಕೈಗಾರಿಕೆಗಳ ಅಸ್ತಿತ್ವ, ವಿದ್ಯಾರ್ಥಿಗಳ ಶಿಕ್ಷಣ, ಆಸ್ಪತ್ರೆಗಳ ಕಾರ್ಯಾಚರಣೆ ಹಾಗೂ ಸಾಮಾನ್ಯ ಜನರ ದೈನಂದಿನ ಜೀವನದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಮೂಲಭೂತ ಸಾರ್ವಜನಿಕ ಸೇವೆಯಾಗಿದೆ. ಇಂತಹ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಹಂತ-ಹಂತವಾಗಿ ಪ್ರವೇಶ ಕಲ್ಪಿಸುವ ಯಾವುದೇ ಕ್ರಮವನ್ನು ಜನಸಾಮಾನ್ಯರು ಒಪ್ಪುವುದಿಲ್ಲ ಎಂದು ತಿಳಿಸಿದರು.ಪ್ರಸ್ತುತ ರಾಜ್ಯದ ಎಸ್ಕಾಂಗಳು ಕೇವಲ ಲಾಭದ ದೃಷ್ಟಿಯಿಂದ ಕಾರ್ಯನಿರ್ವಹಿಸುವುದಿಲ್ಲ. ರೈತರಿಗೆ ಸಬ್ಸಿಡಿ, ಗ್ರಾಮೀಣ ಪ್ರದೇಶಗಳಿಗೆ ಸೇವಾ ವಿಸ್ತರಣೆ, ಸಾಮಾಜಿಕ ಜವಾಬ್ದಾರಿ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿವೆ. ಆದರೆ, ಖಾಸಗಿ ಸಂಸ್ಥೆಗಳ ಪ್ರವೇಶದಿಂದ ಭವಿಷ್ಯದಲ್ಲಿ ವಿದ್ಯುತ್ ದರಗಳ ಮೇಲಿನ ಒತ್ತಡ, ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ನೀಡಲಾಗುತ್ತಿರುವ ಸಬ್ಸಿಡಿ ವ್ಯವಸ್ಥೆಯ ದುರ್ಬಲೀಕರಣ, ಗ್ರಾಮೀಣ ಪ್ರದೇಶಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ವಲಯದ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುವ ಆತಂಕ ರಾಜ್ಯದ ಜನರಲ್ಲಿ ಹಾಗೂ ವಿದ್ಯುತ್ ನೌಕರರಲ್ಲಿ ಮೂಡಿದೆ ಎಂದು ವೇದಿಕೆ ಮನವರಿಕೆ ಮಾಡಿತು.
ಈ ಪ್ರಕ್ರಿಯೆ “ಸಮಾನಾಂತರ ವಿತರಣಾ ವ್ಯವಸ್ಥೆ " ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹಿಂಬಾಗಿಲಿನ ಖಾಸಗೀಕರಣ ಪ್ರಯತ್ನವೆಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿದೆ. ರಾಜ್ಯದ ದೀರ್ಘ ಕಾಲೀನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಇಲ್ಲದೇ ಇದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲೇಕರ ಇದ್ದರು.