ಹಾವೇರಿ:ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳ ಬೋಧನೆಗೆ ನಿಯೋಜಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ನಿಸ್ಸೀಮಗೌಡ್ರ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಜೂ. 8ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಕರಡು ನಿಯಮದ ಪ್ರಕಾರ ಪದವಿಪೂರ್ವ ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳ ಶಿಕ್ಷಕರಾಗಿ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರಮ ಉಪನ್ಯಾಸಕರ ಹುದ್ದೆಯ ಗೌರವ ಹಾಗೂ ಸೇವಾ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವವನ್ನೇ ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಪದವಿಪೂರ್ವ ಕಾಲೇಜುಗಳು ಪದವಿ ಕಾಲೇಜುಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಬಳಿಕ ಅವುಗಳನ್ನು ಶಾಲಾ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಯಿತು. ಸರ್ಕಾರ ನಮ್ಮನ್ನು `ಉಪನ್ಯಾಸಕರು'''''''' ಎಂದು ನೇಮಕ ಮಾಡಿಕೊಂಡಿದ್ದು, ಈಗ `ಶಿಕ್ಷಕರಾಗಿ'''''''' ನಿಯೋಜಿಸುವುದು ಹಿಂಬಡ್ತಿ ಮಾಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಿಯು ಉಪನ್ಯಾಸಕರ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ಪರೀಕ್ಷೆಗಳ ಜೊತೆಗೆ ನೀಟ್, ಜೆಇಇ, ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವುದಾಗಿದೆ. ಇದರ ಜತೆಗೆ ಹೈಸ್ಕೂಲ್ ವಿದ್ಯಾರ್ಥಿಗಳ ಬೋಧನೆಯ ಹೊಣೆ ನೀಡಿದರೆ ಗುಣಮಟ್ಟದ ಶಿಕ್ಷಣದ ಮೇಲೆಯೂ ಪರಿಣಾಮ ಬೀಳಲಿದೆ. ಕೆಪಿಎಸ್ ಶಾಲೆಗಳಲ್ಲಿ ಪಿಯು ಉಪನ್ಯಾಸಕರನ್ನು ಹೈಸ್ಕೂಲ್ ತರಗತಿಗಳ ಬೋಧನೆಗೆ ಬಳಸುವ ಯೋಜನೆ ಸರ್ಕಾರದ ಮುಂದಿದ್ದು, ಹೈಸ್ಕೂಲ್‌ಗೆ ನಿಯೋಜನೆಗೊಂಡ ಉಪನ್ಯಾಸಕರ ಆಡಳಿತಾತ್ಮಕ ನಿಯಂತ್ರಣವನ್ನು ಡಿಡಿಪಿಐ ನೋಡಲಿದ್ದಾರೆಯೋ ಅಥವಾ ಡಿಡಿಪಿಯು ನೋಡಲಿದ್ದಾರೆಯೋ ಎಂಬುದರ ಕುರಿತು ಸರ್ಕಾರ ಇನ್ನೂ ಸ್ಪಷ್ಟತೆ ನೀಡಿಲ್ಲ ಎಂದು ತಿಳಿಸಿದರು.
ಪಿಯು ಉಪನ್ಯಾಸಕರ ಎಲ್ಲ ಸಂಘಟನೆಗಳು ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ಕರಡು ನಿಯಮವನ್ನು ಹಿಂಪಡೆಯದಿದ್ದರೆ ಜುಲೈ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಪೂ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಸರ್ಕಾರ ಹೊರಡಿಸಿರುವ ಕರಡು ನಿಯಮಾವಳಿ ಪಪೂ ಕಾಲೇಜು ಶಿಕ್ಷಣದ ಅಸ್ತಿತ್ವವನ್ನೇ ಕಸಿದುಕೊಳ್ಳುತ್ತಿರುವ ಹುನ್ನಾರವಾಗಿದೆ. ಇದೊಂದು ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಮಕ್ಕಳ ಉನ್ನತೀಕರಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕೆ ಹೊರತು, ಕೊಟ್ಟಿರುವ ಹಕ್ಕನ್ನು ಕಿತ್ತುಕೊಳ್ಳಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯುವುದರ ಜತೆಗೆ ವಿದ್ಯಾರ್ಥಿ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಸರ್ಕಾರ ಕರಡು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅನುದಾನಿತ ಪಪೂ ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಪರಶುರಾಮ ಗಚ್ಚಿನಮನಿ, ಸಂಚಾಲಕ ಶೇಖರ ಭಜಂತ್ರಿ, ಶಿವಾನಂದ ಕಡಕೋಳ, ಸತೀಶ ಬೇವಿನಹಳ್ಳಿ ಉಪಸ್ಥಿತರಿದ್ದರು.