ಬಿಇಒ ಧನಂಜಯ ಅವರು ಮದ್ದೂರು ತಾಲೂಕಿಗೆ ಬಂದ ನಂತರ ೧೩ ಸರ್ಕಾರಿ ಶಾಲೆಗಳು ಮುಚ್ಚಿವೆ. ಅನಧಿಕೃತವಾಗಿ ನಡೆಯುತ್ತಿರುವ ಎಂಟು ಶಾಲೆಗಳ ವಿರುದ್ಧ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತಿದ್ದರೂ ಬಿಇಒ ಧನಂಜಯ ಅವರು ಯಾವುದೇ ಕ್ರಮ ಕೈಗೊಳ್ಳದೆ ಅನಧಿಕೃತ ಶಾಲೆಗಳ ಪರವಾಗಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರು ತಾಲೂಕಿನಲ್ಲಿ ಅನಧಿಕೃತ ಶಾಲೆಗಳಿಗೆ ಬಿಇಒ ಬೆಂಬಲವಾಗಿ ನಿಂತಿರುವುದರಿಂದಲೇ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಇವರ ಅಧಿಕಾರ ದುರುಪಯೋಗದ ವಿರುದ್ಧ ಆ.೧೭ರಂದು ಬಿಇಒ ಕಚೇರಿ ವಿರುದ್ಧ ತಮಟೆ ಚಳವಳಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಯುವ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಕುಮಾರ್ ಹೇಳಿದರು.ಬಿಇಒ ಧನಂಜಯ ಅವರು ಮದ್ದೂರು ತಾಲೂಕಿಗೆ ಬಂದ ನಂತರ ೧೩ ಸರ್ಕಾರಿ ಶಾಲೆಗಳು ಮುಚ್ಚಿವೆ. ಅನಧಿಕೃತವಾಗಿ ನಡೆಯುತ್ತಿರುವ ಎಂಟು ಶಾಲೆಗಳ ವಿರುದ್ಧ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತಿದ್ದರೂ ಬಿಇಒ ಧನಂಜಯ ಅವರು ಯಾವುದೇ ಕ್ರಮ ಕೈಗೊಳ್ಳದೆ ಅನಧಿಕೃತ ಶಾಲೆಗಳ ಪರವಾಗಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮದ್ದೂರು ತಾಲೂಕಿನ ಪೂರ್ಣಪ್ರಜ್ಞಾ ಕಾನ್ವೆಂಟ್, ಕೆಸ್ತೂರಿನ ವಿವೇಕಾನಂದ ಪ್ರೌಢಶಾಲೆ, ತೊರೆಶೆಟ್ಟಿಹಳ್ಳಿ ಸ್ಫೂರ್ತಿಧಾಮ ಪಬ್ಲಿಕ್ ಸ್ಕೂಲ್, ದುಂಡನಹಳ್ಳಿಯ ಹೊಯ್ಸಳ, ಭಾರತೀನಗರದ ಜನನಿ, ಗೆಜ್ಜಲಗೆರೆಯ ಸೂರ್ಯೋದಯ ಸೇರಿದಂತೆ ಹಲವು ಶಾಲೆಗಳ ಸ್ಥಳ ಬದಲಾವಣೆಯಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಒಂದು ವರ್ಷದಿಂದ ಈ ಶಾಲೆಗಳ ಬಗ್ಗೆ ಉಪ ನಿರ್ದೇಶಕರ ಕಚೇರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.ಕೆಸ್ತೂರಿನ ವಿವೇಕಾನಂದ ಪ್ರೌಢಶಾಲೆ ೧೯೯೫ರ ಹಿಂದೆ ಶ್ರೀಈಶ್ವರ ದೇವಸ್ಥಾನದ ಕೊಡುಗೆ ಜಮೀನಾಗಿದ್ದು, ಈ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದು, ೨೦೧೫ರಲ್ಲಿ ಶಾಲೆಯವರು ಕೊಂಡುಕೊಂಡಿದ್ದಾರೆ. ಈ ಶಾಲೆಯು ೧೯೮೯ರಲ್ಲಿ ಕೇವಲ ೯ ಮತ್ತು ೧೦ನೇ ತರಗತಿ ನಡೆಸಲು ಮಾತ್ರ ಅನುಮತಿ ಪಡೆದಿದೆ. ಸರ್ವೇ ನಂ.೨ರಲ್ಲಿ ಅನುಮತಿ ಪಡೆದಿದ್ದು, ಸರ್ವೇ ನಂ.೧ರಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಆದ್ದರಿಂದ ಈ ಶಾಲೆಗಳ ನೋಂದಣಿ ರದ್ದುಪಡಿಸುವಂತೆ ಆಗ್ರಹಪಡಿಸಿದರು.
ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್‌ನವರು ೨೦ಕ್ಕೂ ಹೆಚ್ಚು ಆರ್‌ಟಿಸಿಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದು, ರಾಜಾಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಕೃಷಿ ಜಮೀನಿಗೆ ಅನುಮತಿಯನ್ನು ಪಡೆದು ಶಾಲೆ ನಡೆಸುತ್ತಿದ್ದು, ಶಾಲೆಯ ಸ್ಥಳ ಬದಲಾವಣೆಯಾಗಿದೆ. ಅದೇ ರೀತಿ ಮಲ್ಲನಕುಪ್ಪೆ ಗೇಟ್ ಬಳಿ ಅನುಮತಿ ಪಡೆದಿರುವ ಹೊಯ್ಸಳ ಶಾಲೆಯನ್ನು ದುಂಡನಹಳ್ಳಿಯ ಕೆಇಬಿ ಸ್ಟೇಷನ್ ಬಳಿ ನಡೆಸುತ್ತಿದ್ದಾರೆ. ತೊರೆಶೆಟ್ಟಹಳ್ಳಿಯ ಸ್ಫೂರ್ತಿಧಾಮ ಶಾಲೆಯು ೨೦೦೫ರಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಅನುಮತಿ ಪಡೆದು ಪ್ರಸ್ತುತ ಸರ್ವೇ ನಂ.೩೯೧ರಲ್ಲಿ ಶಾಲೆಯನ್ನು ನಡೆಸುತ್ತಿದ್ದಾರೆ. ಈ ಶಾಲೆಗಳಲ್ಲದೆ ಭಾರತೀನಗರದ ಜನನಿ, ಗೆಜ್ಜಲಗೆರೆಯ ಸೂರ್ಯೋದಯ ಕಾನ್ವೆಂಟ್‌ಗಳ ನೋಂದಣಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.ತೊರೆಶೆಟ್ಟಹಳ್ಳಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಪೂರ್ವ ಪ್ರಾಥಮಿಕ ಶಾಲೆಯು ಒಂದೇ ವ್ಯಕ್ತಿಯ ಒಂದೇ ಸರ್ವೇ ನಂ. ಜಾಗವಾಗಿದೆ, ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆ ಮಾಡಿಸಿಕೊಂಡಿದ್ದರೂ ಸ್ಥಳ ಬದಲಾವಣೆ ಕಾರಣ ನೀಡಿ ಬಿಇಒ ಧನಂಜಯ ಅವರು ಶಾಲೆಯವರ ಜೊತೆ ಕೈಜೋಡಿಸಿ ನೋಂದಣಿ ಸಂಖ್ಯೆಯನ್ನು ರದ್ದುಪಡಿಸಿರುವುದು ದುರುದ್ದೇಶದಿಂದ ಕೂಡಿದೆ. ಈ ಶಾಲೆಗಳ ಬಗ್ಗೆ ಬಿಇಒ ಧನಂಜಯರವರಿಗೆ ಮತ್ತು ಇಲಾಖೆಯವರಿಗೆ ಈ ಶಾಲೆಗಳು ಸ್ಥಳ ಬದಲಾವಣೆಯಾಗಿರುವುದು ಕಂಡುಬಂದಿದ್ದರೂ ಕೂಡ ನೋಂದಣಿ ಸಂಖ್ಯೆಯನ್ನು ರದ್ದುಪಡಿಸುತ್ತಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಗಿರೀಶ್, ರಾಘವೇಂದ್ರ, ಬೋರಯ್ಯ ಇದ್ದರು.