ಕನ್ನಡಪ್ರಭ ವಾರ್ತೆ ಬೆಳಗಾವಿ
ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿ ಅವ್ಯವಸ್ಥೆ, ರಸ್ತೆ ಪುನರ್‌ಸ್ಥಾಪನೆ ವಿಳಂಬ ಹಾಗೂ ನೀರಿನ ಸಂಪರ್ಕ ನೀಡುವಲ್ಲಿ ಉಂಟಾಗಿರುವ ಗೊಂದಲಗಳ ಕುರಿತು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಗರದ ಗುಮ್ಮಟ ಮಾಳಾದಲ್ಲಿ ಬುಧವಾರ ನಡೆದ ನಗರಸೇವಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಭೆಯಲ್ಲಿ ನೀರಿನ ಸಮಸ್ಯೆ, ಅಪೂರ್ಣ ಕಾಮಗಾರಿ, ರಸ್ತೆ ತೋಡಿಕೆ, ಗಟಾರಿನಲ್ಲಿ ಪೈಪ್‌ಲೈನ್ ಅಳವಡಿಕೆ ಹಾಗೂ ಹಣ ವಸೂಲಿ ಆರೋಪಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ನೀರು ಕೊಡ್ತೀರೋ... ಸೆರೆ ಕೊಡ್ತೀರೋ? ಉತ್ತರ ಭಾಗದಲ್ಲಿ ಒಂದೇ ಮನೆಗೆ ಎರಡು ಕನೆಕ್ಷನ್ ಕೊಡುತ್ತೀರಿ. ದಕ್ಷಿಣ ಭಾಗದಲ್ಲಿ ಕೊಡಲ್ಲ ಎಂದು ನಿಯಮ ತೋರಿಸುತ್ತೀರಿ. ಉತ್ತರಕ್ಕೆ ಒಂದು ನಿಯಮ, ದಕ್ಷಿಣಕ್ಕೆ ಇನ್ನೊಂದು ನಿಯಮನಾ? ಎಂದು ಪ್ರಶ್ನಿಸಿದರು. ಪ್ರತಿ ನೀರಿನ ಸಂಪರ್ಕಕ್ಕೆ ₹3 ಸಾವಿರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಅಸಮಾಧಾನ ವ್ಯಕ್ತಪಡಿಸಿದ ಅವರು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕನೆಕ್ಷನ್ ಹೆಸರಿನಲ್ಲಿ ಹಣ ಕೇಳುವುದು ಸರಿಯಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದರು.24x7 ನೀರು ಯೋಜನೆ ಕಾಮಗಾರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, 72 ಸಭೆ ನಡೆಸಿದರೂ ಸಮಸ್ಯೆಗಳು ಬಗೆಹರಿದಿಲ್ಲ. ಆರು ವರ್ಷಗಳಿಂದ ಯೋಜನೆ ನಡೆಯುತ್ತಿದೆಯಾದರೂ ರಸ್ತೆ ತೋಡಿ ಬಿಟ್ಟು ಹೋಗುವ ಪರಿಸ್ಥಿತಿ ಮುಂದುವರಿದಿದೆ. ಕೆಲಸ ಮಾಡಬೇಕಾದರೆ ಸಮರ್ಪಕವಾಗಿ ಮಾಡಿ, ಇಲ್ಲದಿದ್ದರೆ ಕಾಮಗಾರಿ ಕೈಬಿಡಿ ಎಂದು ತರಾಟೆಗೆ ತೆಗೆದುಕೊಂಡರು.
ನಗರದ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳು, ನೀರಿನ ಸಮಸ್ಯೆ ಹಾಗೂ ರಸ್ತೆ ಪುನರ್‌ಸ್ಥಾಪನೆ ಬಾಕಿ ಇರುವ ಸ್ಥಳಗಳ ಸಂಪೂರ್ಣ ಮಾಹಿತಿಯನ್ನು ತಕ್ಷಣ ನೀಡಬೇಕು. ಮುಖ್ಯರಸ್ತೆಗಳನ್ನು ಕತ್ತರಿಸದಂತೆ ಹಾಗೂ ಒಳರಸ್ತೆಗಳಲ್ಲಿ ಕಾಮಗಾರಿ ಆರಂಭಿಸುವ ಮೊದಲು ಸಂಬಂಧಿತ ನಗರಸೇವಕರ ಅನುಮತಿ ಪಡೆಯುವಂತೆ ತಿಳಿಸಿದರು. ಕೆಇಬಿ ಹಾಗೂ ಮೇಘಾ ಗ್ಯಾಸ್ ಇಲಾಖೆಗೆ ಮುಂಚಿತ ಮಾಹಿತಿ ನೀಡದೆ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಬಾರದು ಎಂದೂ ನಿರ್ದೇಶನ ನೀಡಿದರು. ನಾಳೆಯೊಳಗೆ ನೀರಿನ ಪೂರೈಕೆ ಸಮಸ್ಯೆ ಸರಿಪಡಿಸಬೇಕು. ಸೋಮವಾರದೊಳಗೆ ರಸ್ತೆ ಪುನರ್‌ಸ್ಥಾಪನೆ ಪೂರ್ಣಗೊಳಿಸಬೇಕು. ಇನ್ನು ಮುಂದೆ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.