ಕೊಳ್ಳೇಗಾಲದಲ್ಲಿ ಡಿಸ್ಕಸ್ ಥ್ರೋ ಪಂದ್ಯದಲ್ಲಿ ಅಭಿಜಿತ್‌ನಾಯಕ್ ರಾಷ್ಟ್ರಮಟ್ಟಕ್ಕೆ ಆಯ್ಕೆ

| Published : Nov 30 2024, 12:47 AM IST

ಕೊಳ್ಳೇಗಾಲದಲ್ಲಿ ಡಿಸ್ಕಸ್ ಥ್ರೋ ಪಂದ್ಯದಲ್ಲಿ ಅಭಿಜಿತ್‌ನಾಯಕ್ ರಾಷ್ಟ್ರಮಟ್ಟಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಅಭಿಜಿತ್ ನಾಯಕ್ ಎಂಬ ವಿದ್ಯಾರ್ಥಿ ಡಿಸ್ಕಸ್ ಥ್ರೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಎಲ್ಲ ರಂಗಗಳಲ್ಲೂ ನಮ್ಮ ತಾಲೂಕು, ಜಿಲ್ಲೆಯನ್ನು ಪ್ರತಿನಿಧಿಸಿ ಸಾಧನೆ ಮಾಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ಕಲೋತ್ಸವ, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಅಭಿಜಿತ್ ನಾಯಕ್ ಎಂಬ ವಿದ್ಯಾರ್ಥಿ ಡಿಸ್ಕಸ್ ಥ್ರೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಎಲ್ಲ ರಂಗಗಳಲ್ಲೂ ನಮ್ಮ ತಾಲೂಕು, ಜಿಲ್ಲೆಯನ್ನು ಪ್ರತಿನಿಧಿಸಿ ಸಾಧನೆ ಮಾಡುವ ಮೂಲಕ ಗಡಿ ಜಿಲ್ಲೆಗೆ ಅಂಟಿರುವ ಹಿಂದುಳಿದ ಜಿಲ್ಲೆ ಎಂಬ ಹೆಸರನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಆರ್‌ಸಿಎಂ ಶಾಲಾ ಆವರಣದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಲೋತ್ಸವ, ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಬಜೆಟ್‌ನಲ್ಲಿ ಸುಮಾರು ₹7700 ಕೋಟಿ ಶಿಕ್ಷಣಕ್ಕೆ ಮೀಸಲಿಟ್ಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ರಾಜ್ಯದಲ್ಲಿ 48ಸಾವಿರಕ್ಕೂ ಅಧಿಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. 1 ಕೋಟಿ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಹಾಗಾಗಿ ಸುಮಾರು ₹7700 ಕೋಟಿಗಳನ್ನು ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ. ಒಟ್ಟು ಆಯವ್ಯಯದಲ್ಲಿ ಶೇ.೧೫ ರಷ್ಟು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಅಂಕಿ-ಅಂಶದಿಂದ ಸರ್ಕಾರ ಶಿಕ್ಷಣ ವ್ಯವಸ್ಥೆ ಎಷ್ಟು ಒತ್ತು ನೀಡುತ್ತಿದೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ ಎಂದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು, ಪಠ್ಯದಷ್ಟೇ ಇತರೆ ಚಟುವಟಿಕೆಗಳು ಮುಖ್ಯ. ಅಭಿಜಿತ್ ನಾಯಕ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ, ಈ ವಿದ್ಯಾರ್ಥಿ ಸಾಧನೆ ಇತರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ ಎಂದರು.

ನಗರಸಭಾಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉತ್ತಮ ರೀತಿ ಆಯೋಜಿಸಲಾಗಿದ್ದು ಇಂತಹ ಕಾರ್ಯಕ್ರಮಗಳು ಮಕ್ಕಳ ಪ್ರೋತ್ಸಾಹಕ್ಕೆ ಸಹಕಾರಿಯಾಗಲಿವೆ ಎಂದರು. ಈ ಸಂದರ್ಭದಲ್ಲಿ ಮಕ್ಕಳ ವಯೋಮಾನಕ್ಕೆ ಅನುಗುಣವಾಗುವಂತಹ 35 ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಲೆಮಹದೇಶ್ವರ ಸ್ವಾಮಿ, ಸೈನಿಕ, ಸೌರಮಂಡಲ, ವಿವಿಧ ಪ್ರಾಣಿ, ಪಕ್ಷಿಗಳಂತೆ ಹಲವು ರೀತಿಯ ಛದ್ಮ ವೇಷಗಳಲ್ಲಿ ಪುಟಾಣಿಗಳು ಕಂಗೊಳಿಸಿ ಶಾಸಕರು, ಗಣ್ಯರ ಮನ ಸೆಳೆದು ಪ್ರಶಂಸೆಗೂ ಭಾಜನರಾದರು.

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ನಾಸೀರ್ ಶರೀಫ್, ಸುಮಸುಬ್ಬಣ್ಣ, ಡಿಡಿಪಿಐ ರಾಮಚಂದ್ರ ಅರಸ್, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಕಾರ್ಯದರ್ಶಿ ಚಿಕ್ಕರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಆರ್‌ಸಿಎಂ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಗೆಟ್ಸಿ ಇನ್ನಿತರರಿದ್ದರು.