ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಗೆ ಸೋಮವಾರ ಸಂಜೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು.ಮೊದಲು ಅಭಿಮನ್ಯು ಸೇರಿದಂತೆ 14 ಆನೆಗಳಿಗೂ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಾಸವಾಗಿರುವ ಖಾಸ್ ಅರಮನೆ ಬಳಿ ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಖಾಸ್ ಅರಮನೆ ಮುಂಭಾಗದಲ್ಲಿ ಕ್ರೇನ್ ಅಳವಡಿಸಿ ಅಭಿಮನ್ಯು ಆನೆ ಮೈಮೇಲೆ ಮರ ಅಂಬಾರಿ ಕೂರಿಸಿ ನಂತರ ಹಗ್ಗದ ಸಹಾಯದಿಂದ ಬಿಗಿಯಾಗಿ ಕಟ್ಟಲಾಯಿತು.ಮರದ ಅಂಬಾರಿಯೊಳಗೆ ಮರಳು ಮೂಟೆಗಳನ್ನು ಇರಿಸಲಾಯಿತು. 280 ಕೆ.ಜಿ ತೂಕದ ಮರದ ಅಂಬಾರಿ, ಗಾದಿ, ನಮ್ದಾ, ಮರಳು ಮೂಟೆಗಳು ಸೇರಿದಂತೆ ಸುಮಾರು 700 ಕೆ.ಜಿ ಬಾರವನ್ನು ಹೊತ್ತು ಅಭಿಮನ್ಯು ಆನೆಯು ಗಜ ಗಾಂಭೀರ್ಯದ ಹೆಜ್ಜೆ ಹಾಕಿತು.ಜಂಬೂಸವಾರಿ ಸಾಗುವ ಮಾರ್ಗದಲ್ಲೇ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಆನೆಯೊಂದಿಗೆ ಕುಮ್ಕಿ ಆನೆಗಳಾಗಿಕಾವೇರಿ ಮತ್ತು ಹೇಮಾವತಿ ಸಾಗಿದವು. ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಗೋಪಿ, ಸುಗ್ರೀವ, ಶ್ರೀಕಂಠ, ಲಕ್ಷ್ಮಿ ಮತ್ತು ರೂಪಾ ಸಾಲಾನೆಗಳಾಗಿ ಸಾಗಿದವು. ಅಲ್ಲದೆ, ಅಶ್ವರೋಹಿದಳದ ಕುದುರೆಗಳು ಸಹ ತಾಲೀಮಿನಲ್ಲಿ ಪಾಲ್ಗೊಂಡಿದ್ದವು.ಖಾಸ್ ಅರಮನೆ ಆವರಣದಿಂದ ಹೊರಟ ಗಜಪಡೆಯು ಅರಮನೆ ಒಳಾವರಣದಲ್ಲಿ ಸಾಗಿ ಅರಮನೆ ಮುಂಭಾಗಕ್ಕೆ ಬಂದವು. ನಂತರ ಬಲರಾಮ ದ್ವಾರದಿಂದ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪಕ್ಕೆ ತಲುಪಿದವು. ಕೆಲಕಾಲ ವಿಶ್ರಾಂತಿಯ ಬಳಿಕ ಮತ್ತೆ ಅದೇ ಮಾರ್ಗದಲ್ಲಿ ರಾತ್ರಿ ವೇಳೆಗೆ ಅರಮನೆಗೆ ಬಂದು ಸೇರಿದವು.ಈ ವೇಳೆ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಅರಮನೆ ಎಸಿಪಿ ಚಂದ್ರಶೇಖರ್ ಮೊದಲಾದವರು ಇದ್ದರು.----ಬಾಕ್ಸ್... ರಾಜವಂಶಸ್ಥರ ನೋಟಅಭಿಮನ್ಯು ಆನೆ ಮೇಲೆ ಮರದ ಅಂಬಾರಿ ಕಟ್ಟುವುದನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಖಾಸ್ ಅರಮನೆಯಿಂದ ಕೆಲಕಾಲ ವೀಕ್ಷಿಸಿದರು.----ಬಾಕ್ಸ್...ರಾಜಮಾರ್ಗದಲ್ಲಿ ಜನಜಾತ್ರೆ!ಸಾಂಸ್ಕೃತಿಕ ನಗರಿ ಮೈಸೂರಿನ ರಾಜಮಾರ್ಗದಲ್ಲಿ ದಸರಾ ಗಜಪಡೆಯ ನಿತ್ಯ ತಾಲೀಮು ನಡೆಸುತ್ತಿದೆ. ಪ್ರತಿನಿತ್ಯ ಆನೆಗಳನ್ನು ನೋಡಲು ಸಲುವಾಗಿಯೇ ಜನಜಾತ್ರೆ ಸೇರುತ್ತಿದೆ.ಮರದ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಸೋಮವಾರ ಸಂಜೆ ಮೈಸೂರು ಅರಮನೆಯಿಂದ ಬನ್ನಿಮಂಟಪದ ಕಡೆಗೆ ರಾಜಮಾರ್ಗದಲ್ಲಿ ಸಾಗುತ್ತಿತ್ತು. ಉಳಿದ ಆನೆಗಳು ಹಿಂಬಾಲಿಸುತ್ತಿದ್ದವು. ಗಜಪಡೆಯನ್ನು ವೀಕ್ಷಿಸಲು ಸಾವಿರಾರು ಮಂದಿ ರಸ್ತೆಯ ಎರಡು ಬದಿಯಲ್ಲಿ ನೆರೆದಿದ್ದರು. ತಮ್ಮ ಮೊಬೈಲ್ ಕ್ಯಾಮರಾಗಳಲ್ಲೇ ಆನೆಗಳ ವಿಡಿಯೋ, ಫೋಟೋ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದರು.ಜನಸ್ತೋಮ ಹೆಚ್ಚಾಗುತ್ತಿದ್ದಂತೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ನಿಯಂತ್ರಿಸಲು ಹರಸಾಹಸ ಪಟ್ಟರು. ಇನ್ನೂ ಸಂಚಾರ ಪೊಲೀಸರು ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದರು.