ಇಂದು ಅಭಿನವ ಯಚ್ಚರ ಶ್ರೀಗಳ ಮೌನ ಅನುಷ್ಠಾನ ಮುಕ್ತಾಯ

| Published : Jul 30 2025, 12:47 AM IST

ಸಾರಾಂಶ

10 ಗಂಟೆಗೆ ದುರ್ಗಾ ನಮಸ್ಕಾರ ವಿಶೇಷ ಪೂಜೆ ಮತ್ತು ಮೌನ ಅನುಷ್ಠಾನ ಮುಕ್ತಾಯ ಸಮಾರಂಭಕ್ಕೆ ನಾಡಿನ ವಿವಿಧ ಮಠಾಧೀಶರು, ಗಣ್ಯ ಮಾನ್ಯರು, ಶ್ರೀಮಠದ ಭಕ್ತರು ಪಾಲ್ಗೋಳ್ಳವರು

ಎಸ್.ಜಿ.ತೆಗ್ಗಿನಮನಿ ನರಗುಂದ

ಬಂಡಾಯ ನೆಲ ನರಗುಂದದ ಮಲಪ್ರಭೆ ದಡಕ್ಕೆ ಹೊಂದಿಕೊಂಡಿರುವ ಶಿರೋಳ ಗ್ರಾಮದ ಶ್ರೀ ಜಗದ್ಗುರು ಯಚ್ಚರ ಮಹಾಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು 21 ದಿನಗಳ ಪರ್ಯಂತ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡ 3ನೇ ವರ್ಷದ ಮೌನ ಅನುಷ್ಠಾನ ಮುಕ್ತಾಯ ಸಮಾರಂಭ ಜು. 30ರಂದು ಶ್ರೀ ಮಠದ ಆವರಣದಲ್ಲಿ ಜರುಗಲಿದೆ.

ಬುಧವಾರ ಬೆಳಗ್ಗೆ 6 ಗಂಟೆಗೆ ಜಗದ್ಗುರು ಯಚ್ಚರಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಂಗಳಾರತಿ ಜರುಗಲಿದೆ. 10 ಗಂಟೆಗೆ ದುರ್ಗಾ ನಮಸ್ಕಾರ ವಿಶೇಷ ಪೂಜೆ ಮತ್ತು ಮೌನ ಅನುಷ್ಠಾನ ಮುಕ್ತಾಯ ಸಮಾರಂಭಕ್ಕೆ ನಾಡಿನ ವಿವಿಧ ಮಠಾಧೀಶರು, ಗಣ್ಯ ಮಾನ್ಯರು, ಶ್ರೀಮಠದ ಭಕ್ತರು ಪಾಲ್ಗೋಳ್ಳವರು. 12 ಗಂಟೆಗೆ ಶ್ರೀಗಳ ಪಾದಪೂಜೆ ಕಾರ್ಯಕ್ರಮ ಜರುಗಲಿದೆ. 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ.

ಅಭಿನವ ಯಚ್ಚರ ಶ್ರೀಗಳು ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾತ್ಮ ಅಳವಡಿಸಿಕೊಂಡವರು, 22ನೇ ವಯಸ್ಸಿನಲ್ಲಿಯೇ ಶಿರೋಳ ಗವಿಮಠದ ಜವಾಬ್ದಾರಿ ತೆಗೆದುಕೊಂಡು ಕೆಲವೇ ವರ್ಷಗಳಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಮಾಡುವ ಮೂಲಕ ಜನಮಾನಸದ ಮನಸ್ಸು ಗೆದ್ದವರು. ಎಲ್ಲ ಸಮುದಾಯ ಮತ್ತು ಯುವಕರನ್ನು ಗಣನೆಗೆ ತೆಗೆದುಕೊಂಡು ಮಠ ಮುನ್ನಡೆಸುತ್ತಿದ್ದಾರೆ. ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಮಠ ಇಂದು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದೆ.

ವಿವಿಧ ಕಾರ್ಯಗಳು:ವಿದ್ಯಾರ್ಥಿಗಳಿಗಾಗಿ ಉಚಿತ ಶಿಬಿರ, ಪ್ರತಿಭಾ ಪುರಸ್ಕಾರ, ಪರಿಸರ ಸ್ನೇಹಿ ಕಾರ್ಯಕ್ರಮ, ಸ್ವಚ್ಛತಾ ಕಾರ್ಯಕ್ರಮ, ಉಚಿತ ಆರೋಗ್ಯ ಶಿಬಿರ, ಅನ್ನ ದಾಸೋಹ, ಕಾರ್ಗಿಲ್ ವಿಜಯೋತ್ಸವ, ಸೈನಿಕರ ಸನ್ಮಾನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಪೂಜ್ಯರು ಮಾಡಿಕೊಂಡು ಬರುತ್ತಿದ್ದಾರೆ.

ಅನ್ನದಾತ, ಯೋಧರ ಪಾದಪೂಜೆ:ದೇಶದಲ್ಲಿಯೇ ರೈತ, ಯೋಧರ ಪಾದಪೂಜೆ ಮಾಡುವ ಏಕೈಕ ಸ್ವಾಮೀಜಿ ಮತ್ತು ಏಕೈಕ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ಜಾತ್ರೆಯಲ್ಲಿ ಸಾವಿರಾರು ಜನಸ್ತೋಮ ಸೇರುವ ಮೂಲಕ ನಾಡಿನ ಹೆಸರಾಂತ ಗಣ್ಯಮಾನ್ಯರು ಶ್ರೀಮಠಕ್ಕೆ ಆಗಮಿಸುತ್ತಾರೆ. ಪ್ರತಿ ಹುಣ್ಣಿಮೆಯಂದು ಶಿವಾನುಭವ ಗೋಷ್ಠಿ ನಡೆಸುವ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕಳಕಳಿ ಮೂಡಿಸುತ್ತಿದ್ದಾರೆ.

ಸದ್ಯ ಶ್ರೀಮಠ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದು. ಮುಂಬರುವ ದಿನಮಾನಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಜ್ಜೆಯಿಡಲು ಸಜ್ಜಾಗುತ್ತಿದೆ. ಬಡಮಕ್ಕಳಿಗೆ ಸಂಸ್ಕಾರಯುಕ್ತ ಭಾರತೀಯ ಸಂಸ್ಕೃತಿ ಕುರಿತಾದ ಶಿಕ್ಷಣ ನೀಡಬೇಕೆಂಬುದು ಪೂಜ್ಯರ ಕನಸಾಗಿದೆ. ಸದ್ಯ ಅದರ ತಯಾರಿ ನಡೆಯುತ್ತಿದೆ.

ಪರಿಸರ ಪ್ರೇಮ: ಪ್ರತಿ ವರ್ಷ ಶ್ರೀಗಳು ಪರಿಸರ ದಿನಾಚರಣೆ ಅಷ್ಟೇ ಅಲ್ಲದೇ ಬಿಡುವಿನ ಸಮಯದಲ್ಲೂ ಪರಿಸರ ಕಾಳಜಿ ವಹಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ 1000 ಸಸಿ ನೆಟ್ಟು ಪೋಷಿಸಿದರು. ಅಷ್ಟೇ ಅಲ್ಲದೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿನ ಹಜರತ್ ಬಾಷಾ ಮಸೀದಿಯ ಜಾಗದಲ್ಲಿ ಪೂಜ್ಯರು ಉದ್ಯಾನವನ ನಿರ್ಮಿಸಿದ್ದು ಪರಿಸರ ಕಾಳಜಿ ಜತೆಗೆ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹೀಗೆ ಪೂಜ್ಯರು ಎಲ್ಲ ಸಮಾಜದವರನ್ನು ಕೂಡಿಸಿಕೊಂಡು ಶಾಂತ ಸಮಾಜ ಸ್ವಸ್ಥ ಸಮಾಜ ನಿರ್ಮಿಸುತ್ತಿದ್ದಾರೆ.