‘ಅಭಿನಯ ಸರಸ್ವತಿ’ ಪಂಚಭೂತಗಳಲ್ಲಿ ಲೀನ

| N/A | Published : Jul 15 2025, 11:45 PM IST / Updated: Jul 16 2025, 06:57 AM IST

ಸಾರಾಂಶ

ಹಿರಿಯ ಕಲಾವಿದೆ ಬಿ.ಸರೋಜಾ ದೇವಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಮಂಗಳವಾರ ನೆರವೇರಿತು. ಜನ್ಮಭೂಮಿಯಲ್ಲೇ ಅಭಿನಯ ಸರಸ್ವತಿ ಪಂಚಭೂತಗಳಲ್ಲಿ ಲೀನವಾದರು.

 ಚನ್ನಪಟ್ಟಣ/ಬೆಂಗಳೂರು :  ಸೋಮವಾರ ನಿಧನರಾದ ಪಂಚಭಾಷಾ ನಟಿ, ದಕ್ಷಿಣ ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್, ಹಿರಿಯ ಕಲಾವಿದೆ ಬಿ.ಸರೋಜಾ ದೇವಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಮಂಗಳವಾರ ನೆರವೇರಿತು. ಜನ್ಮಭೂಮಿಯಲ್ಲೇ ಅಭಿನಯ ಸರಸ್ವತಿ ಪಂಚಭೂತಗಳಲ್ಲಿ ಲೀನವಾದರು.

ಮಂಗಳವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ದಶವಾರ ಗ್ರಾಮದಲ್ಲಿನ ಸರೋಜಾದೇವಿಯವರ ಜಮೀನಿನಲ್ಲಿ ಅವರ ಇಚ್ಛೆಯಂತೆ ಅವರ ತಾಯಿಯ ಸಮಾಧಿಯ ಪಕ್ಕ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರ ದತ್ತು ಪುತ್ರ ಗೌತಮ್, ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಿದರು.

ಗಣ್ಯರಿಂದ ಅಂತಿಮ ನಮನ:

ಇದಕ್ಕೂ ಮೊದಲು, ಮಂಗಳವಾರ ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನ 11ನೇ ಅಡ್ಡರಸ್ತೆಯಲ್ಲಿರುವ ಸರೋಜಾದೇವಿ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ, ಅಗಲಿದ ನಟಿಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಿಎಂ, ಸರೋಜಾದೇವಿಯವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡಬೇಕೆನ್ನುವ ಕುರಿತು ಬಿಬಿಎಂಪಿಯೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಇದೇ ವೇಳೆ, ಸಚಿವರಾದ ಎಚ್.ಸಿ.ಮಹದೇವಪ್ಪ, ಜಮೀರ್ ಅಹಮದ್, ಹಿರಿಯ ನಟ ಸುಂದರ್‌ರಾಜ್‌, ಮದನ್‌ಪಟೇಲ್‌, ನಟಿ ಹೇಮಾ ಸೇರಿ ಚಿತ್ರರಂಗದ ಅನೇಕ ಗಣ್ಯರು ಅಗಲಿದ ಅಭಿನಯ ಸರಸ್ವತಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.

ಬಳಿಕ, 10.15ರ ಹೊತ್ತಿಗೆ ಮಲ್ಲೇಶ್ವರದ ಅವರ ಮನೆಯಿಂದ ತವರು ದಶವಾರ ಗ್ರಾಮಕ್ಕೆ ಪಾರ್ಥಿವ ಶರೀರದ ಮೆರವಣಿಗೆ ಹೊರಟಿತು. ಮೆರವಣಿಗೆ ವೇಳೆ ಮಾರ್ಗದುದ್ದಕ್ಕೂ ಅಭಿಮಾನಿಗಳು ದುಃಖಭರಿತರಾಗಿ ಅಂತಿಮ ವಿದಾಯ ಹೇಳಿದರು.

ಮಧ್ಯಾಹ್ನ ಸುಮಾರು 2.15ರ ಹೊತ್ತಿಗೆ ಅವರ ಪಾರ್ಥಿವ ಶರೀರ ಅವರ ಸ್ವಗ್ರಾಮ ದಶವಾರಕ್ಕೆ ಆಗಮಿಸಿತು. ನಗರದ ಗಾಂಧಿಭವನದ ಬಳಿ ಅಗಲಿದ ನಟಿಯ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ, ಪಾರ್ಥಿವ ಶರೀರವನ್ನು ಗ್ರಾಮದ ಆಂಜನೇಯಸ್ವಾಮಿ ದೇವಾಲಯಕ್ಕೆ ಸುತ್ತು ಹಾಕಿಸಿ ಅವರ ಮನೆಗೆ ತರಲಾಯಿತು. ಮನೆಯ ಬಳಿ ಕೆಲ ಕಾಲ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ನಂತರ, ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿರಿಸಿ ಡೊಳ್ಳು, ತಮಟೆ ವಾದನದೊಂದಿಗೆ ಮೆರವಣಿಗೆಯಲ್ಲಿ ಜಮೀನಿಗೆ ತೆಗೆದುಕೊಂಡು ಹೋಗಲಾಯಿತು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ, ರಾಷ್ಟ್ರಗೀತೆ ನುಡಿಸಿ, ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸರೋಜಾದೇವಿಯವರ ಕುಟುಂಬದವರಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸಿದರು. ನಂತರ, ಒಕ್ಕಲಿಗ ಸಂಪದ್ರಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.

ಡಿ.ಕೆ.ಶಿವಕುಮಾರ್, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಹಿರಿಯ ಕಲಾವಿದರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಜಯಮಾಲಾ, ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕ ಬಸಂತಕುಮಾರ್ ಪಾಟೀಲ, ಆದಿಚುಂಚನಗಿರಿ ರಾಮನಗರ ಶಾಖಾಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಸರೋಜಾದೇವಿ ಹೆಸರುಉಳಿಸಲು ಕ್ರಮ: ಡಿಕೆಶಿ

ಈ ವೇಳೆ ಮಾತನಾಡಿದ ಡಿಕೆಶಿ, ಅವರ ಕಲಾಸೇವೆಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಸರೋಜಾದೇವಿಯವರು ನನಗೆ ಸಣ್ಣ ವಯಸ್ಸಿನಿಂದಲೂ ಪರಿಚಯ. ನಾನು ಆರಂಭದಲ್ಲಿ ಸಚಿವನಾದಾಗ, ನನ್ನನ್ನು ಕರೆದು ನೀನು ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂದು ಹೇಳಿದ್ದರು. ಅವರು ನಮ್ಮ ಜಿಲ್ಲೆಯವರು ಎಂಬ ಹೆಮ್ಮೆ ಇದೆ ಎಂದರು.

Read more Articles on