ಸಾರಾಂಶ
ವಿಜಯ್ ಕೇಸರಿ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣದಕ್ಷಿಣ ಭಾರತದ ಖ್ಯಾತನಾಮರ ಜತೆ ನಟಿಸಿದ ಪಂಚಭಾಷಾ ನಟಿ ಬಿ.ಸರೋಜಾದೇವಿ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದವರು.
ದಶವಾರ ಗ್ರಾಮದ ಬೈರಪ್ಪ ಮತ್ತು ರುದ್ರಮ್ಮ ದಂಪತಿ ಪುತ್ರಿಯಾಗಿ ಅವರು ೧೯೩೭ರಲ್ಲಿ ಜನಿಸಿದರು.ಅವರ ತಂದೆ ಬೈರಪ್ಪ ಪೊಲೀಸ್ ಅಧಿಕಾರಿಯಾಗಿದ್ದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೆಲಸ ಮಾಡುತ್ತಿದ್ದರು. ಬಿ.ಸರೋಜಾದೇವಿ ಬಾಲ್ಯದಿಂದಲೇ ನಾಟ್ಯ, ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇದನ್ನು ಗಮನಿಸಿದ ಇವರ ತಂದೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅವರನ್ನು ನಾಟ್ಯ ಶಾಲೆಗೆ ಸೇರಿಸಿದರು. ನಾಟ್ಯ ಕಲಿತ ಸರೋಜಾದೇವಿ ಮುಂದೆ ನಟನಾ ಕ್ಷೇತ್ರಕ್ಕೆ ಕಾಲಿರಿಸಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ನಟಿಸುವ ಮೂಲಕ ಪಂಚಭಾಷಾ ನಟಿಗಾಗಿ ಖ್ಯಾತಿ ಪಡೆದರು.
ಹುಟ್ಟೂರಿನ ಜತೆ ಒಡನಾಟ:ಚಿಕ್ಕವಯಸ್ಸಿನಲ್ಲೇ ಬೆಂಗಳೂರು ಸೇರಿದರೂ ಬಿ.ಸರೋಜಾದೇವಿ ತನ್ನ ಹುಟ್ಟೂರಿನ ಬಗ್ಗೆ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದರು. ಪ್ರತಿ ವರ್ಷ ಪಿತೃಪಕ್ಷದ ವೇಳೆ ತಮ್ಮ ಪೂರ್ವಿಕರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಇದಲ್ಲದೇ ಬೇಸರವಾದಾಗಲೆಲ್ಲಾ ಗ್ರಾಮದಲ್ಲಿನ ತಮ್ಮ ತೋಟಕ್ಕೆ ಬಂದು ಹೋಗುತ್ತಿದ್ದರು. ಇನ್ನು ಹುಟ್ಟೂರಿಗೆ ಆಗಮಿಸಿದಾಗ ಗ್ರಾಮಸ್ಥರನ್ನು ಅವರು ಅತ್ಯಂತ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅನಾರೋಗ್ಯದ ಕಾರಣ ಹೊರಗಿನ ಸಂಚಾರ ಕಡಿಮೆ ಮಾಡಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿ, ಕೆಲಕಾಲ ಮನೆಯಲ್ಲಿದ್ದು, ಬಳಿಕ ತಾಯಿಯ ಸಮಾಧಿಗೆ ನಮಿಸಿ ವಾಪಸ್ ತೆರಳಿದ್ದರು.
ಹುಟ್ಟೂರಿನಲ್ಲಿ ಶಾಲೆ ಕಟ್ಟಿಸಿಕೊಟ್ಟಿದ್ದರು:ತಾನು ಹುಟ್ಟಿದ ಊರಿನ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ೧೯೬೦ರಲ್ಲಿ ಬಿ.ಸರೋಜಾದೇವಿ ಶಾಲೆಯನ್ನು ಕಟ್ಟಿಸಿಕೊಟ್ಟಿದ್ದರು. ಇಂದಿಗೂ ಈ ಶಾಲೆ ಇದ್ದು, ಸಾಕಷ್ಟು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಈ ಶಾಲೆ ಕಾರಣವಾಗಿತ್ತು. ಇನ್ನು ತನ್ನ ಊರಿನ ಬಗ್ಗೆ ಸದಾ ಅಭಿಮಾನ ಹೊಂದಿದ್ದ ಬಿ.ಸರೋಜಾದೇವಿ ಗ್ರಾಮದಿಂದ ಯಾರೇ ಹೋದರೂ ಆತ್ಮೀಯವಾಗಿ ಮಾತನಾಡಿಸಿ ಕಳುಹಿಸುತ್ತಿದ್ದರು.
ಕೆರೆ ಬಾಗಿನದಲ್ಲಿ ಭಾಗಿ:ಸರೋಜಾದೇವಿ ದಶವಾರ ಗ್ರಾಮದವರಾಗಿದ್ದರೂ ತಾಲೂಕಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ವಿರಳ. ೨೦೧೫ರಲ್ಲಿ ಮಳೂರು ಕೆರೆಗೆ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಅಂದಿನ ಶಾಸಕ ಸಿ.ಪಿ.ಯೋಗೇಶ್ವರ್ ಸರೋಜಾದೇವಿಯವರನ್ನು ಕೆರೆ ಬಾಗಿನ ಕಾರ್ಯಕ್ರಮಕ್ಕೆ ಕರೆಯಿಸಿ ಸನ್ಮಾನಿಸುವ ಕೆಲಸ ಮಾಡಿದ್ದರು. ಕಾರ್ಯಕ್ರಮದಲ್ಲಿ ಸರೋಜಾದೇವಿ ತಮ್ಮ ಹುಟ್ಟೂರು, ಚಿತ್ರರಂಗದಲ್ಲಿನ ಸಾಧನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದನ್ನು ಹೊರತುಪಡಿಸಿ ಬೇರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಉದಾಹರಣೆಗಳೇ ಇಲ್ಲವೆನ್ನಬಹುದು. ಹುಟ್ಟೂರಲ್ಲಿ ಇಂದು ಅಂತ್ಯಕ್ರಿಯೆ:
ಸರೋಜಾದೇವಿಯವರ ಪಾರ್ಥಿವ ಶರೀರ ಹುಟ್ಟೂರಾದ ದಶವಾರಕ್ಕೆ ಇಂದು ಆಗಮಿಸಲಿದ್ದು, ಅವರ ನೆಚ್ಚಿನ ತೋಟದಲ್ಲಿ ತಾಯಿಯ ಸಮಾಧಿ ಪಕ್ಕದಲ್ಲೇ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.ಪತಿಯನ್ನು ಕಳೆದಕೊಂಡ ಬಳಿಕ ಸರೋಜಾದೇವಿ ಆಧ್ಯಾತ್ಮಿಕದ ಬಗ್ಗೆ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದರು. ಬೇಜಾರಾದಾಗಲೆಲ್ಲಾ ದಶವಾರಕ್ಕೆ ಆಗಮಿಸಿ ತಾಯಿಯ ಸಮಾಧಿ ಹತ್ತಿರ ಬಂದು ಹೋಗುತ್ತಿದ್ದರೆಂದು ಗ್ರಾಮಸ್ಥರು ತಿಳಿಸುತ್ತಿದ್ದು, ಅವರ ಅಂತಿಮ ಆಸೆಯಂತೆ ತಾಯಿಯ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಸರೋಜಾದೇವಿಯವರ ಅಂತ್ಯಕ್ರಿಯೆ ದಶವಾರ ಗ್ರಾಮದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಡಿವೈಎಸ್‌ಪಿ ಗಿರಿ, ಎಎಸ್‌ಪಿ, ತಹಸೀಲ್ದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಗ್ರಾಮದಲ್ಲಿ ಮಡುಗಟ್ಟಿದ ಮೌನ:
ಬಿ.ಸರೋಜಾದೇವಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಹುಟ್ಟೂರು ದಶವಾರ ಗ್ರಾಮದಲ್ಲಿ ಮೌನಮಡುಗಟ್ಟಿತ್ತು. ಗ್ರಾಮದ ಹಿರಿಯರು ಸರೋಜಾದೇವಿಯವರ ನೆನಪುಗಳನ್ನು ಮೆಲುಕು ಹಾಕಿ ಸಂತಾಪ ಸೂಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ದಶವಾರ ಗ್ರಾಮದಲ್ಲಿ ಹುಟ್ಟಿ ಬೆಳೆದರೂ ಹೆಚ್ಚಾಗಿ ಗ್ರಾಮದಲ್ಲಿ ಕಾಣಿಸಿಕೊಳ್ಳದ ಸರೋಜಾದೇವಿ, ಗ್ರಾಮಕ್ಕೆ ಬಂದಾಗ ಸ್ನೇಹಿತರನ್ನು, ಅಕ್ಕಪಕ್ಕದವರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ ಕಷ್ಟ ಸುಖವನ್ನು ವಿಚಾರಿಸುತ್ತಿದ್ದರು. ಸಾವಿನ ಬಳಿಕ ತನ್ನ ದೇಹ ಹುಟ್ಟಿದ ಮಣ್ಣಲ್ಲೇ ಮಣ್ಣಾಗಬೇಕೆಂದು ಬಯಸಿದ್ದ ಕಾರಣ ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಸರೋಜಾದೇವಿ ಮೃತದೇಹ ಗ್ರಾಮಕ್ಕೆ ಬರುವ ಸುದ್ದಿ ಹಬ್ಬುತ್ತಿದ್ದಂತೆ ದಶವಾರ ಗ್ರಾಮದಲ್ಲಿ ಮೌನ ಮಡುಗಟ್ಟಿತ್ತು.
ಕಂಬನಿ ಮಿಡಿದ ಬೊಂಬೆ ನಗರಿ:ಸರೋಜಾದೇವಿಯವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಜಕಾರಣಿಗಳು, ಸಂಘ ಸಂಸ್ಥೆಗಳು, ಕಲಾವಿದರು, ಸಾರ್ವಜನಿಕರು ಕಂಬನಿ ಮಿಡಿದಿದ್ದು, ಹಲವು ಕಡೆಗಳಲ್ಲಿ ಸರೋಜಾದೇವಿಯವರ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಹುಟ್ಟೂರು ದಶವಾರ ಗ್ರಾಮದಲ್ಲಿ ಸಹ ಸರೋಜಾ ದೇವಿ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಲಾಯಿತು.