ಗುರು ಪೂರ್ಣಿಮೆಯಂದು ಭೈರವೈಕ್ಯ ಶ್ರೀಗಳ ಪುತ್ಥಳಿಗೆ ಅಭಿಷೇಕ, ಪೂಜೆ

| Published : Jul 11 2025, 12:31 AM IST / Updated: Jul 11 2025, 12:32 AM IST

ಗುರು ಪೂರ್ಣಿಮೆಯಂದು ಭೈರವೈಕ್ಯ ಶ್ರೀಗಳ ಪುತ್ಥಳಿಗೆ ಅಭಿಷೇಕ, ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಲಕ್ಷಾಂತರ ಬಡ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಗುರುಗಳ ಮಾರ್ಗದರ್ಶನ ಅದ್ಭುತವಾಗಿದೆ. ಗುರುವನ್ನು ಭಕ್ತಿಯಿಂದ ಸ್ಮರಣೆ ಮಾಡಿ ಗುರುಗಳ ಕೃಪೆಗೆ ಪಾತ್ರರಾಗುತ್ತಿರುವ ನಾವೇ ಧನ್ಯರಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗುರು ಪೂರ್ಣಿಮೆ ಅಂಗವಾಗಿ ಪಟ್ಟಣದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪುತ್ಥಳಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪೂಜೆ ಪುನಸ್ಕಾರಗಳು ಶ್ರದ್ಧಾಭಕ್ತಿಯಿಂದ ನಡೆದವು.

ಮಠದ ಹೇಮಗಿರಿ ಶಾಖೆ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ಭೈರವೈಕ್ಯ ಶ್ರೀಗಳ ಪುತ್ಥಳಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಇದೇ ವೇಳೆ ಎಲ್ಲ ಹಿರಿಯರನ್ನು ಸನ್ಮಾನಿಸಲಾಯಿತು.

ಅಜ್ಞಾನದ ಅಂಧಕಾರ ಹೊಡೆದೊಡಿಸಿ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡಿದ ಗುರುವನ್ನು ಭಕ್ತಿಯಿಂದ ಸ್ಮರಿಸಿ ಪೂಜೆ ಮಾಡುವುದು ನಮ್ಮ ಸನಾತನ ಹಿಂದೂ ಧರ್ಮದ ಒಂದು ಭಾಗವಾಗಿದೆ. ಇಂದು ಗುರುಪೂರ್ಣಿಮೆ ಪುಣ್ಯ ದಿನ. ಗುರುಗಳ ನಾಮಸ್ಮರಣೆ ಮಾಡಿ ಅವರು ತೋರಿದ ದಾರಿಯಲ್ಲಿ ಸಾಗಲು ಗುರುವಿನಲ್ಲಿ ಪ್ರಾರ್ಥಿಸಿ ಸಮಾಜಮುಖಿಯಾಗಿ ಹೆಜ್ಜೆ ಹಾಕಲು ಪ್ರಶಸ್ತ ದಿನವಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಲಕ್ಷಾಂತರ ಬಡ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಗುರುಗಳ ಮಾರ್ಗದರ್ಶನ ಅದ್ಭುತವಾಗಿದೆ. ಗುರುವನ್ನು ಭಕ್ತಿಯಿಂದ ಸ್ಮರಣೆ ಮಾಡಿ ಗುರುಗಳ ಕೃಪೆಗೆ ಪಾತ್ರರಾಗುತ್ತಿರುವ ನಾವೇ ಧನ್ಯರಾಗಿದ್ದೇವೆ ಎಂದು ತಿಳಿಸಿದರು.

ಪಾಂಡವಪುರ ತಾಲೂಕಿನ ಅಲ್ಪಹಳ್ಳಿ ವರಸಿದ್ದಿ ಕಾಲಭೈರವೇಶ್ವರ ಪೀಠದ ತ್ರಿಶೋಭಾನಂದ ಸ್ವಾಮೀಜಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಯಕನಹಳ್ಳಿ ಬಿ.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಬ್ಯಾಲದಕೆರೆ ಪಾಪೇಗೌಡ, ವಕೀಲರಾದ ಶೀಳನೆರೆ ಎಸ್.ಸಿ.ವಿಜಯ್ ಕುಮಾರ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ವಕೀಲ ಚಟ್ಟಂಗೆರೆ ಬಿ.ನಾಗೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಹೊಸಹೊಳಲು ಶ್ರೀನಿವಾಸಮೂರ್ತಿ ಸೇರಿದಂತೆ ನೂರಾರು ಜನರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.