ಕಲ್ಲನ್ನು ಶಿಲೆಯಾಗಿಸುವ ಸಾಮರ್ಥ್ಯ ಶಿಕ್ಷಕರಿಗೆ: ಶಾಸಕ ರಾಜು ಸೇಠ

| Published : Sep 06 2024, 01:04 AM IST

ಕಲ್ಲನ್ನು ಶಿಲೆಯಾಗಿಸುವ ಸಾಮರ್ಥ್ಯ ಶಿಕ್ಷಕರಿಗೆ: ಶಾಸಕ ರಾಜು ಸೇಠ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಲ್ಲಿರುವ ಅಜ್ಞಾನ ದೂರ ಮಾಡಿ ಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಿಕ್ಷಕರ ಸೇವೆ ನಿರಂತರವಾದದು ಎಂದು ಶಾಸಕ ಆಸೀಫ್ (ರಾಜು) ಸೇಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿಗಳಲ್ಲಿರುವ ಅಜ್ಞಾನ ದೂರ ಮಾಡಿ ಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಿಕ್ಷಕರ ಸೇವೆ ನಿರಂತರವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಕರ್ತವ್ಯ ಪಾಲನೆ ಬಹುಮುಖ್ಯದಾಗಿರುತ್ತದೆ. ಕಲ್ಲನ್ನು ಶಿಲೆಯಾಗಿಸುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಹೇಳಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ನಗರ ಇವರ ಸಂಯಕ್ತಾಶ್ರಯದಲ್ಲಿ ಗುರುವಾರ ಗಾಂಧಿಭವನದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ-೨೦೨೪ ಹಾಗೂ ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೆ ಗುರುವಿರಲಿ ಮುಂದೆ ಗುರಿಯಿರಲಿ ಎಂಬ ಮಾತಿದೆ. ಅದೇ ರೀತಿ ಶಿಕ್ಷಕರು ಯಾವಾಗಲೂ ನಮಗೆ ಗುರಿ ತೋರಿಸುತ್ತಾರೆ. ನಾವು ಆ ಗುರಿಯನ್ನು ಪಥದಲ್ಲಿ ನಡೆಯಬೇಕಷ್ಟೆ. ಆಟ, ಪಾಠ, ಸಂಗೀತ-ನೃತ್ಯ ಎಲ್ಲವನ್ನು ಕೂಡ ಶಿಕ್ಷಕರು ಕಲಿಸುತ್ತಾರೆ. ಮನೆಯಲ್ಲಿ ನಾವು ತಂದೆ-ತಾಯಿಯನ್ನು ಪ್ರೀತಿಸಿದಂತೆ ಶಾಲೆಯಲ್ಲಿ ಮಾರ್ಗದರ್ಶಕರಾದ ಶಿಕ್ಷಕರನ್ನು ಪ್ರೀತಿಸುತ್ತೇವೆ. ನಮ್ಮ ಜೀವನದಲ್ಲಿ ಗೆಲುವು, ಸಾಧನೆಯ ಕ್ಷಣ ಕಾಣಬೇಕೆಂದರೆ ಅದಕ್ಕೆ ಶಿಕ್ಷಕರು ಕಾರಣ. ಪ್ರತಿಯೊಬ್ಬ ಶಿಕ್ಷಕರು ಸಹ ತಮ್ಮ ಶಿಷ್ಯರ ಅಥವಾ ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮಾಡಲು ಸ್ಫೂರ್ತಿ ತುಂಬುತ್ತಾರೆ. ಎಲ್ಲರೂ ಶಿಕ್ಷಕರ ವೃತ್ತಿ ಗೌರವಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಲಿಷ್ಠ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ಧಿ, ಕಲಿಸಿ ಬದುಕು ರೂಪಿಸುವ ಶಿಲ್ಪಿ. ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಶಿಸ್ತಿನ ಜೀವನ ಕಲಿಸುವ ಶಿಕ್ಷಕರ ವೃತ್ತಿ ಅಮೂಲ್ಯವಾದುದ್ದು. ಶಿಕ್ಷಣಕ್ಕೆ ಮತ್ತು ಶಿಕ್ಷಕರಿಗೆ ಆದ್ಯತೆ ನೀಡಿ ಪ್ರತಿಯೊಬ್ಬರೂ ಶಿಕ್ಷಕರಿಗೆ ಗೌರವ ನೀಡಬೇಕು ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ (ಆಡಳಿತ ) ಲೀಲಾವತಿ ಹಿರೇಮಠ ಮಾತನಾಡಿದರು.

ಸನ್ಮಾನ ಕಾರ್ಯಕ್ರಮ: ಇದಕ್ಕೂ ಮುಂಚೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಹಾಗೂ ಬೆಳಗಾವಿ ನಗರ ವಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆಯ ೩ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಬೆಳಗಾವಿ ನಗರ ವಲಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಾಲೆಗಳ ಮುಖ್ಯಶಿಕ್ಷಕರಿಗೆ ಫಲಕ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಳಗಾವಿ ವಿಭಾಗದ ಪದವಿ ನಿಮಿತ್ತ ಸಹ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಡಯಟ್ ಮಣ್ಣೂರ (ಅಭಿವೃದ್ಧಿ) ಉಪನಿರ್ದೇಶಕ ಬಸವರಾಜ ನಾಲತವಾಡ, ನಗರ ವಲಯದ (ಪ್ರಭಾರ ) ಕ್ಷೇತ್ರ ಶಿಕ್ಷಣಾಧಿಕಾರಿ ಐ.ಡಿ. ಹಿರೇಮಠ, ಉಪನಿರ್ದೇಶಕರ ಕಚೇರಿ ಮತ್ತು ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ, ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.