ಸಾರಾಂಶ
ಮಹೇಶ ಛಬ್ಬಿ ಗದಗ
ಜಿಲ್ಲೆಯ ಶಿರಹಟ್ಟಿ-ಮಾಗಡಿ ಮಧ್ಯ ಕಳೆದ ಮೂರು ದಿನಗಳಲ್ಲಿ 15ಕ್ಕೂ ಹೆಚ್ಚು ಕೋಗಿಲೆ ಚಾಣ ಹಕ್ಕಿಗಳು ಅಸಹಜವಾಗಿ ಅಸು ನೀಗುತ್ತಿವೆ. ಸಾವಿಗೆ ಕಾರಣ ತಿಳಿಯದೇ ಪರಿಸರ ಪ್ರೇಮಿಗಳಲ್ಲಿ ಆತಂಕ ಹೆಚ್ಚಿದೆ.ಉತ್ತರ ಕರ್ನಾಟಕದ ವಿದೇಶಿ ಹಕ್ಕಿಗಳ ತಾಣ, ಗದಗ ಜಿಲ್ಲೆಯ ಪಕ್ಷಿ ಸಂರಕ್ಷಣಾ ಮೀಸಲು ಮಾಗಡಿ ಕೆರೆಗೆ ಅನೇಕ ಜಾತಿಯ ಹಕ್ಕಿಗಳು ವಲಸೆ ಬರುತ್ತವೆ. ಅವುಗಳ ಕಲರವ ಪರಿಸರಪ್ರೇಮಿಗಳಿಗೆ, ಶಾಲಾ ಮಕ್ಕಳಿಗೆ, ಪ್ರವಾಸಿಗರಿಗೆ ಮುದ ನೀಡುವಂತಿರುತ್ತದೆ. ಆದರೆ ಇಲ್ಲಿಯ ಕೆಲವು ಹಕ್ಕಿಗಳು ಅಸಹಜವಾಗಿ ಸಾವು ಕಾಣುತ್ತಿದ್ದು, ಕಾರಣ ತಿಳಿದುಬರುತ್ತಿಲ್ಲ. ಶಿರಹಟ್ಟಿ-ಮಾಗಡಿ ಮಾರ್ಗ ಮಧ್ಯೆ ಕಳೆದ ಮೂರು ದಿನಗಳಲ್ಲಿ 15ಕ್ಕೂ ಹೆಚ್ಚು ಕೋಗಿಲೆ ಚಾಣಗಳು ರಸ್ತೆಯಲ್ಲಿ ಬಿದ್ದು ಅಸು ನೀಗಿವೆ. ಕಣ್ಣಿಗೆ ಕಂಡಿದ್ದೆ ಇಷ್ಟು ಹಕ್ಕಿಗಳು, ಇನ್ನೂ ಕಾಣದೆ ಅದೆಷ್ಟು ಹಕ್ಕಿಗಳು ಸಾವನ್ನಪ್ಪಿವೆಯೋ ಏನೋ, ಅವು ಹಾರುತ್ತಾ ತ್ರಾಣವಿಲ್ಲದೆ ರಸ್ತೆ ಮೇಲೆ ಬಿದ್ದಾಗ ಅವುಗಳಿಗೆ ನೀರು ಕುಡಿಸಿ ಬದುಕಿಸಿದರೆ ಆಯಿತು ಎಂದು ಸಾರ್ವಜನಿಕರು ನೀರು ಕುಡಿಸಲು ಮುಂದಾದಾಗ ಹಕ್ಕಿಗಳು ನೀರು ಕುಡಿದ ಕೆಲವೇ ಕ್ಷಣದಲ್ಲಿ ಪ್ರಾಣ ಬಿಡುತ್ತಿವೆ ಎನ್ನುತ್ತಾರೆ ಸಾರ್ವಜನಿಕರು.
ಗಂಭೀರವಾಗಿ ಪರಿಗಣಿಸುತ್ತಿಲ್ಲ: ಕೋಗಿಲೆ ಚಾಣ ಹಕ್ಕಿಗಳು ಅಸಹಜವಾಗಿ ಮರಣ ಹೊಂದುತ್ತಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ, ಇದು ನಮಗೆ ಸಂಬಂಧ ಪಡುವುದಿಲ್ಲ ಎನ್ನುತ್ತಾರೆ. ಹಕ್ಕಿಗಳ ಸಾವಿಗೆ ಕಾರಣ ತಿಳಿಯುತ್ತಿಲ್ಲ. ಹಕ್ಕಿಗಳು ವಾಯುಗಾಮಿ ಸಮಸ್ಯೆ, ಫಂಗಲ್ ಅಥವಾ ವೈರಲ್ ಇನ್ಫೆಕ್ಷನ್ ಇನ್ಯಾವುದು ರೋಗಕ್ಕೆ ತುತ್ತಾಗಿ ಪ್ರಾಣ ಬಿಡುತ್ತಿವೆಯೋ ಏನೋ ತಿಳಿಯದಂತಾಗಿದೆ. ಒಂದು ಹಕ್ಕಿಯಿಂದ ಇನ್ನೊಂದು ಹಕ್ಕಿಗೆ ರೋಗ ಬಾಧಿಸಿ ಹಕ್ಕಿಗಳ ಸಂತತಿ ನಾಶವಾಗುತ್ತವೆಯೋ ಏನೋ ತಿಳಿಯದು ಎನ್ನುತ್ತಾರೆ ಸ್ಥಳೀಯರು. ಈ ಬಗ್ಗೆ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂಬುದು ಆರೋಪಿಸಿದ್ದಾರೆ.ಮಾಗಡಿ ಕೆರೆ ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದು ಜಿಲ್ಲೆಗೆ ಹೆಮ್ಮೆ ತಂದಿದೆ. ಆದರೆ ಇಲ್ಲಿಯ ಹಕ್ಕಿಗಳು ಏಕಾಏಕಿ ಪ್ರಾಣ ಬಿಡುತ್ತಿರುವುದು ಹಕ್ಕಿಗಳ ಸಂತತಿ ನಾಶವಾಗುವ ಕಳವಳ ಹೆಚ್ಚಿಸಿದೆ. ಅಸಹಜವಾಗಿ ಸತ್ತ ಹಕ್ಕಿಯ ಮರಣೋತ್ತರ ಪರೀಕ್ಷೆ ನಡೆಸಿದರೆ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಪಕ್ಷಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.
ಸಾವಿಗೆ ಸಾಧ್ಯತೆಗಳು: ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆಯುವುದು, ವಿಷ ಆಹಾರ ಸೇವನೆ, ಮಿಂಚು-ಸಿಡಿಲು, ಬಿರುಗಾಳಿಯಿಂದ ಕೂಡಿದ ಮಳೆಗೆ ಕೋಗಿಲೆ ಚಾಣ ಹಕ್ಕಿಗಳು ಮರಣ ಹೊಂದಬಹುದು ಎನ್ನುತ್ತಾರೆ ಜೀವ ವೈವಿಧ್ಯ ಸಂಶೋಧಕರು.3 ದಿನಗಳಲ್ಲಿ 14ರಿಂದ 15 ಹಕ್ಕಿಗಳು ಅಸಹಜ ಮರಣ ಹೊಂದಿರುವುದು ಆಘಾತ ಮತ್ತು ಆತಂಕಕಾರಿ ಸಂಗತಿ. ಸತ್ತ ಹಕ್ಕಿಯ ಮರಣೋತ್ತರ ಪರೀಕ್ಷೆ ನಡೆಸಿದರೆ ಸಾವಿಗೆ ನಿಖರ ಕಾರಣ ತಿಳಿಯಬಹುದು ಮತ್ತು ಪಕ್ಷಿ ಸಾಯುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬಹುದು ಎಂದು ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದ್ದಾರೆ.