ಮೃತ ಮಹಿಳೆಯ ಮೇಲೆ ಅಸಹಜ ಲೈಂಗಿಕ ಕ್ರಿಯೆ: ಆರೋಪಿ ಬಂಧನ

| Published : Oct 11 2024, 11:58 PM IST

ಸಾರಾಂಶ

ಮನೆಗೆ ಬಿಡುವುದಾಗಿ ಹೇಳಿ ಸುಶೀಲಮ್ಮನನ್ನು ಆಟೋ ಹತ್ತಿಸಿಕೊಂಡ ಆರೋಪಿ ಬೇರೆ ದಾರಿಯಲ್ಲಿ ಸಾಗಿದ್ದಾನೆ. ಆಗ ಸುಶೀಲಮ್ಮ ಆಟೋದಿಂದ ಆಚೆಗೆ ಜಿಗಿದಿದ್ದಾಳೆ. ಸುಹೇಲ್ ಆಟೋ ನಿಲ್ಲಿಸಿ ಆಕೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ, ಸ್ಥಳದಲ್ಲೇ ಮೃತಪಟ್ಟ ಮಹಿಳೆಯನ್ನು ತನ್ನ ಆಟೋದಲ್ಲಿ ಹಾಕಿಕೊಂಡು ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದನು

ಕನ್ನಡಪ್ರಭ ವಾರ್ತೆ ಕೋಲಾರ

ರಸ್ತೆ ಬದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಆಟೋ ಹತ್ತಿಸಿಕೊಂಡ ತೆರಳಿದ ವಿಕೃತಕಾಮಿಯೊಬ್ಬ ಆಕೆಯನ್ನು ಕೊಲೆ ಮಾಡಿ ಶವವ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ನಗರದ ಹೈದರ್ ನಗರದ ಆಟೋ ಚಾಲಕ ಸಯ್ಯದ್ ಸುಹೇಲ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ಸೆ.೨೫ರಂದು ಮುಳಬಾಗಿಲಿನ ಹೈದರಿ ನಗರದ ಬಳಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿತ್ತು, ಮೃತಳು ಮುಳಬಾಗಿಲಿನ ಪಳ್ಳಿಗರಪಾಳ್ಯದ ಮೈಕ್ ಶಂಕರ್ ಪತ್ನಿ ಸುಶೀಲಮ್ಮ ಎಂದು ಪತ್ತೆ ಮಾಡಲಾಗಿತ್ತು. ಮಾನಸಿಕವಾಗಿ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸುಶೀಲಮ್ಮ ಸೆ.೨೪ ರಂದು ಮನೆಯಿಂದ ತಪ್ಪಿಸಿಕೊಂಡಿದ್ದಳು, ಆಕೆಗಾಗಿ ಕುಟುಂಬಸ್ಥರು ಹುಡುಕಿದ್ದರಾದರೂ ಪತ್ತೆಯಾಗಿರಲಿಲ್ಲ. ಆದರೆ ಸೆ.೨೫ ರಂದು ಶವವಾಗಿ ಪತ್ತೆಯಾಗಿದ್ದಳು.

ತನಿಖೆ ಆರಂಭಿಸಿದ ಪೊಲೀಸರು, ಆ ರಸ್ತೆಯಲ್ಲಿದ್ದ ನೂರಾರು ಸಿಸಿಟಿವಿ ಕ್ಯಾಮರಾಗಳನ್ನು ತಡಕಾಡಿದ್ದರು. ಆಗ ಅಲ್ಲೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆ.೨೪ರ ಮಧ್ಯರಾತ್ರಿ ಆಟೋದಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿರುವುದು ಸೆರೆಯಾಗಿತ್ತು. ಆಟೋ ಮೇಲಿದ್ದ ಕೆಲವು ಗುರುತುಗಳ ಸುಳಿವು ಆಧರಿಸಿ ಹುಡುಕಾಟ ನಡೆಸಿದಾಗ ಆಟೋ ಮುಳಬಾಗಿಲು ಹೈದರ್ ನಗರದ ಸಯ್ಯದ್ ಸುಹೇಲ್ತಿ ಎಂಬುವನಿಗೆ ಸೇರಿದ್ದು ಎಂಬುದು ಪತ್ತೆಯಾಯಿತು.

ಅಷ್ಟೊತ್ತಿಗಾಗಲೇ ತಲೆಮರೆಸಿಕೊಂಡಿದ್ದ ಸೈಯ್ಯದ್ ಸುಹೇಲ್‌ನನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ದರ್ಗಾದಲ್ಲಿ ಪೊಲೀಸರು ಬಂಧಿಸಿ ತನಿಖೆ ನಡೆಸಿದಾಗ ಆಕೆಯನ್ನು ಕೊಲೆ ಮಾಡಿ, ಮೃತ ದೇಹದ ಮೇಲೆ ಅತ್ಯಾಚಾರ ನಡೆಸಿದ ಸಂಗತಿ ಬಯಲಾಗಿದೆ. ಮನೆಗೆ ಬಿಡುವುದಾಗಿ ಹೇಳಿ ಸುಶೀಲಮ್ಮನನ್ನು ಆಟೋ ಹತ್ತಿಸಿಕೊಂಡ ಆರೋಪಿ ಬೇರೆ ದಾರಿಯಲ್ಲಿ ಸಾಗಿದ್ದಾನೆ. ಆಗ ಸುಶೀಲಮ್ಮ ಆಟೋದಿಂದ ಆಚೆಗೆ ಜಿಗಿದಿದ್ದಾಳೆ. ಸುಹೇಲ್ ಆಟೋ ನಿಲ್ಲಿಸಿ ಆಕೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ, ಸ್ಥಳದಲ್ಲೇ ಮೃತಪಟ್ಟ ಮಹಿಳೆಯನ್ನು ತನ್ನ ಆಟೋದಲ್ಲಿ ಹಾಕಿಕೊಂಡು ಅತ್ಯಾಚಾರ ನಡೆಸಿ, ಶವನ್ನು ಹೈದರ್ ನಗರದ ಹೊರ ವಲಯದ ಖಾಲಿ ಜಾಗದಲ್ಲಿ ಶವ ಬಿಸಾಡಿ ಆರೋಪಿ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.