ಸಾರಾಂಶ
- ಎಐಯುಟಿಯುಸಿ ನೇತೃತ್ವದ ಪ್ರತಿಭಟನೆಯಲ್ಲಿ ಮಂಜುನಾಥ ಕೈದಾಳೆ ಆಗ್ರಹ । ಕಾರ್ಮಿಕರ ಸಹಕಾರ ಸಂಘ ಸ್ಥಾಪಿಸಲು ಆಗ್ರಹ
- ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಹೊರಗುತ್ತಿಗೆ ನೌಕರರ ಸಂಘ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ ಪ್ರತಿಭಟನೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಕಾರ್ಮಿಕರ ಸೇವೆ ಕಾಯಂಗೊಳಿಸಿ, ಅಲ್ಲಿವರೆಗೂ ಆಯಾ ಇಲಾಖೆಗಳಿಂದಲೇ ನೇರ ವೇತನ ಪಾವತಿಸಿ, ಸೇವಾ ಭದ್ರತೆ ಒದಗಿಸುವಂತೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ ಎಐಯುಟಿಯುಸಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟಿಸಿತು.ನಗರದ ಜಿಲ್ಲಾಡಳಿತ ಭವನದ ಎದುರು ಸಂಘಟನೆ ಜಿಲ್ಲಾ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಮಾತನಾಡಿ, ರಾಜ್ಯದಲ್ಲಿ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಕಾರ್ಮಿಕರ ಸೇವೆ ಮಾಡಬೇಕು. ಅಲ್ಲಿವರೆಗೂ ಇಲಾಖೆಯಿಂದಲೇ ನೇರ ವೇತನ ಪಾವತಿಸಿ, ಸೇವಾ ಭದ್ರತೆ ಒದಗಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ವಿವಿಧೋದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅನೇಕ ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟದಿಂದ ಕೂಡಿದೆ. ಸರ್ಕಾರಿ ಇಲಾಖೆಗಳಲ್ಲೇ ದುಡಿಯುತ್ತಿದ್ದರೂ ಕನಿಷ್ಠ ವೇತನ, ಇಪಿಎಫ್, ರಜೆ ಸೇರಿದಂತೆ ಇನ್ನೂ ಅನೇಕ ಕಾನೂನುಬದ್ಧ ಸೌಲಭ್ಯ ಪಡೆಯಲು ಹರಸಾಹಸಪಡಬೇಕಿದೆ. ಹತ್ತಾರು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಕಾರ್ಮಿಕರಿಗೆ ಕೆಲಸದ ಭದ್ರತೆಯೇ ಇಲ್ಲ ಎಂದು ದೂರಿದರು.
ನಿತ್ಯವೂ ಅಭದ್ರತೆಯಲ್ಲೇ ಕೆಲಸ ಮಾಡಬೇಕಿದ್ದು, ನೂರಾರು ಕಾರ್ಮಿಕರು ಇದೇ ಕೆಲಸ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ಎಲ್ಲರೂ ಕಾಯಂ ಸ್ವರೂಪದ ಕೆಲಸ ಮಾಡುತ್ತಿದ್ದರೂ, ಅತ್ಯಂತ ಅಪಾಯಕಾರಿ ವೃತ್ತಿಯಲ್ಲಿದ್ದರೂ, ಸರ್ಕಾರ ಮಾತ್ರ ಸೇವೆ ಕಾಯಂಗೊಳಿಸಿಲ್ಲ. ಕನಿಷ್ಠ ಪಕ್ಷ ಇಂತಹ ಹೊರಗುತ್ತಿಗೆ ಕಾರ್ಮಿಕರನ್ನು ಒಳಗುತ್ತಿಗೆ ಆಧಾರದಲ್ಲಾದರೂ ನೇಮಿಸಿಲ್ಲ. ಬದಲಿಗೆ ಗುತ್ತಿಗೆದಾರರ ಮೂಲಕ ನೂತನ ಜೀತ ಪದ್ಧತಿಗೆ ನೂಕಲಾಗಿದೆ. ಕಾಯಂ ನೇಮಕಾತಿ ಕುರಿತಂತೆ ಕಾರ್ಮಿಕ ನ್ಯಾಯಾಲಯ, ಹೈಕೋರ್ಟ್ ಆದೇಶಗಳನ್ನೇ ಉಲ್ಲಂಘಿಸುತ್ತಾ, ಕಾರ್ಮಿಕ ಕಾನೂನುಗಳನ್ನೂ ಗಾಳಿಗೆ ತೂರಿ, ಅನ್ಯಾಯ ಎಸಗುತ್ತಿರುವ ಗುತ್ತಿಗೆದಾರರಿಂದ ಈ ಕಾರ್ಮಿಕರನ್ನು ಮುಕ್ತಗೊಳಿಸಬೇಕು ಎಂದರು.ಸಂಘಟನೆ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ವಿವಿಧೋದ್ದೇಶ ಸಹಕಾರ ಸಂಘ ರಚಿಸುವ ನಿರ್ಧಾರ ಮಾಡಿರುವುದು ಶ್ಲಾಘನೀಯ. ಆದರೆ ಸಹಕಾರ ಸಂಘ ರಚಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕೆಲ ಜಿಲ್ಲೆಗಳಲ್ಲಿ ಜನವರಿ 2025ರಿಂದಲೇ ಸಹಕಾರ ಸಂಘ ರಚಿಸುವ ಪ್ರಕ್ರಿಯೆ ಆರಂಭವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ₹1 ಸಾವಿರ ಪಾವತಿಸಿ, ಸದಸ್ಯರಾಗಿದ್ದಾರೆ. ಆದರೆ ಈವರೆಗೂ ಸಂಘ ಸಂಪೂರ್ಣ ರಚನೆಯಾಗಿ, ತನ್ನ ಕೆಲಸ ಕಾರ್ಯ ಆರಂಭಿಸಿಲ್ಲ ಎಂದರು.
ಮುಖಂಡರಾದ ನಿಂಗರಾಜ, ಶಿವಾಜಿ ರಾವ್, ರವಿ ನಾಯ್ಕ, ಮನೋಹರ, ಮಂಜುಳಮ್ಮ, ರತ್ನಮ್ಮ, ರಂಗಮ್ಮ, ಜ್ಯೋತಿ, ಇನ್ನಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.- - -
(ಬಾಕ್ಸ್)* ಪ್ರಮುಖ ಬೇಡಿಕೆಗಳು - ಕನಿಷ್ಠ ವೇತನ ಹೆಚ್ಚಿಸುವ ಕುರಿತಂತೆ ರಾಜ್ಯ ಸರ್ಕಾರದ ಅಧಿಸೂಚನೆ ತಕ್ಷಣವೇ ಜಾರಿಗೊಳ್ಳಬೇಕು.
- ಪರಿಷ್ಕೃತ ಕನಿಷ್ಠ ವೇತನ ತಕ್ಷಣ ಜಾರಿಗೊಳಿಸಬೇಕು, ಸರ್ಕಾರಿ ಆದೇಶವಾಗಿ ಅಧಿಸೂಚನೆ ಮಾರ್ಪಾಡಬೇಕು.- ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಇಎಸ್ಐ ಆಸ್ಪತ್ರೆ ಪ್ರಾರಂಭಿಸಬೇಕು.
- ಕಾರ್ಮಿಕರಿಗೆ ಹಾಗೂ ಅಂತಹವರ ಕುಟುಂಬಗಳಿಗೆ ಇಎಸ್ಐ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಬೇಕು.- ಇಎಸ್ಐ ಸೌಲಭ್ಯದ ಪ್ರಕ್ರಿಯೆ ಸರಳೀಕರಿಸಿ, ಮಿತಿಯನ್ನು ಹೆಚ್ಚಿಸಬೇಕು. - ರಾಜ್ಯದ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ₹26 ಸಾವಿರ ನಿಗದಿಪಡಿಸಬೇಕು.
- - --24ಕೆಡಿವಿಜಿ1, 2:
ದಾವಣಗೆರೆ ಡಿಸಿ ಕಚೇರಿ ಎದುರು ಬುಧವಾರ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಸಿ ಮತ್ತು ಡಿ ಗ್ರೂಪ್‌ನ ಹೊರಗುತ್ತಿಗೆ ನೌಕರರ ಸಂಘ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.