ಭ್ರಷ್ಟ ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಮೊಂಡುತನ ಮಾಡುತ್ತಿದೆ. ಈ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಇರುವುದೇ ಭ್ರಷ್ಟರಿಂದ, ಭ್ರಷ್ಟರಿಗಾಗಿ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಭ್ರಷ್ಟ ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಮೊಂಡುತನ ಮಾಡುತ್ತಿದೆ. ಈ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಇರುವುದೇ ಭ್ರಷ್ಟರಿಂದ, ಭ್ರಷ್ಟರಿಗಾಗಿ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಶಾಸಕರ ಭವನದ ವಾಲ್ಮೀಕಿ ಪ್ರತಿಮೆ ಎದುರು ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರ್ಕಾರ ಇದಲ್ಲ. ಬದಲಾಗಿ ಭ್ರಷ್ಟಾಚಾರಿಗಳನ್ನು ರಕ್ಷಿಸಲು ಭ್ರಷ್ಟರಿಂದ, ಭ್ರಷ್ಟಾಚಾರಕ್ಕೋಸ್ಕರ ಇರುವ ಸರ್ಕಾರ. ಸದನ ಮುಗಿದ ಬಳಿಕವೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಮಾನ-ಮರ್ಯಾದೆ ಇದ್ದರೆ ಸಂಪುಟದಿಂದ ಕೈಬಿಡಿ:

ದಲಿತರ ಬಗ್ಗೆ ನಾಗೇಂದ್ರ ಮತ್ತು ಕಾಂಗ್ರೆಸ್ ಸರ್ಕಾರ ಮೊಸಳೆ ಕಣ್ಣೀರು ಹಾಕುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡುವ ವೇಳೆ ನಿಮ್ಮ ದಲಿತಪರ ಕಾಳಜಿ ಎಲ್ಲಿ ಹೋಗಿತ್ತು? ಹಣ ಲೂಟಿ ಮಾಡುವಾಗ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಅದು ದಲಿತರ ಹಣ ಎಂದು ನೆನಪಾಗಲಿಲ್ಲವೇ? ಎಂದರು.

ನಮ್ಮ ಮೇಲೆ ದಲಿತರ ಟಾರ್ಗೆಟ್‌ ಆರೋಪ ಮಾಡುವ ನಿಮಗೆ ನಾಚಿಕೆ ಆಗಬೇಕು. ನಿಮಗೆ ಮಾನ-ಮರ್ಯಾದೆ ಇದ್ದರೆ ಸಬೂಬು ಕೊಡುವುದನ್ನು ಬಿಟ್ಟು ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಲೂಟಿ ಮಾಡಿದ ನಾಗೇಂದ್ರನನ್ನು ಸಚಿವ ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು.

ಸಿದ್ದು ಕೈಬಿಟ್ಟಿದ್ದರು:

ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಈ ನಾಗೇಂದ್ರ ಅವರನ್ನು ಮತ್ತೆ ಸಚಿವನಾಗಿ ಮಾಡಲು ಏನು ಬದಲಾವಣೆ ಆಗಿದೆ? ಇ.ಡಿ ಕ್ಲೀನ್‌ ಚಿಟ್‌ ನೀಡಿದೆಯಾ? ತನಿಖೆ ಈಗಲೂ ನಡೆಯುತ್ತಿದೆ. ಆದರೂ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ರಾಜ್ಯದ ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಬರ, ಕೆಪಿಎಸ್ಸಿ ಹಗರಣ ಮತ್ತಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಮುಖ್ಯಮಂತ್ರಿ ಅವರು ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ರಾಜ್ಯದ ಜನರ ಸರ್ಕಾರದ ಭ್ರಷ್ಟತನ ಸೇರಿ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.ನಾಗೇಂದ್ರ ಹಗರಣಕ್ಕೆ ದಾಖಲೆ ಇವೆ; ಅಶೋಕ್‌:

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಹಗರಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಕೋಟ್ಯಂತರ ರು. ಸಂದಾಯವಾಗಿದೆ. ಹೀಗಾಗಿ ಸಚಿವ ಬಿ.ನಾಗೇಂದ್ರ ಹಗರಣ ನಡೆಸಿರುವುದಕ್ಕೆ ಸೂಕ್ತ ದಾಖಲೆಗಳಿದ್ದರೂ ಅವರನ್ನು ಸಂಪುಟದಿಂದ ವಜಾ ಮಾಡುತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಸಕರ ಭವನದ ಆವರಣದ ವಾಲ್ಮೀಕಿ ಪ್ರತಿಮೆ ಎದುರು ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಮುಟ್ಟಿಸಿರುವ ಬಿಸಿಯನ್ನು ತಡೆದುಕೊಳ್ಳಲಾಗದೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ನಮ್ಮದು ಕೇವಲ ಒಂದು ಪಕ್ಷದ ಹೋರಾಟವಲ್ಲ. ಇದು ದಲಿತರ ಪರವಾದ ಹೋರಾಟ. ಒಂದು ಕೋಟಿಗೂ ಅಧಿಕ ದಲಿತರಿಗೆ ಸೇರಿದ 187 ಕೋಟಿ ರು. ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ ವಿರುದ್ಧ ನಾವು ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ಲೂಟಿ ಮೂಲಕ ದಲಿತರ ಬದುಕನ್ನು ಕಾಂಗ್ರೆಸ್‌ ನಾಯಕರು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.ಕಪ್ಪು ಟೀಶರ್ಟ್‌ ಧರಿಸಿ ವಾಲ್ಮೀಕಿ ಪ್ರತಿಮೆ ಎದುರು ಬಿಜೆಪಿ ಧರಣಿ:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಶಾಸಕರ ಭವನದ ಆವರಣದ ವಾಲ್ಮೀಕಿ ಪ್ರತಿಮೆ ಎದುರು ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಬಿಜೆಪಿ-ಜೆಡಿಎಸ್‌ ಶಾಸಕರು ಬಳಿಕ ವಿಧಾನಸೌಧವರೆಗೆ ಪಾದಯಾತ್ರೆಯನ್ನೂ ನಡೆಸಿದರು.ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿ-ಜೆಡಿಎಸ್‌ ಶಾಸಕರು ಸಚಿವ ನಾಗೇಂದ್ರ ವಿರುದ್ಧ ಬರಹಗಳುಳ್ಳ ಕಪ್ಪು ಟೀ ಶರ್ಟ್‌ ಧರಿಸಿದ್ದರು. ಸಚಿವ ನಾಗೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಾಲ್ಮೀಕಿ ಪ್ರತಿಮೆ ಬಳಿಯಿಂದ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಿದರು.ಕಪ್ಪು ಟೀ ಶರ್ಟ್‌ ಧರಿಸಿದ್ದ ಶಾಸಕರನ್ನು ವಿಧಾನಸಭೆ ಮೊಗಸಾಲೆಯ ಪ್ರವೇಶದ್ವಾರದ ಬಳಿಯೇ ಮಾರ್ಷಲ್‌ಗಳು ತಡೆದರು. ಈ ವೇಳೆ ಶಾಸಕರು ಮತ್ತು ಮಾರ್ಷಲ್‌ಗಳ ನಡುವೆ ತಳ್ಳಾಟ-ನೂಕಾಟ ನಡೆಯಿತು. ಭ್ರಷ್ಟ ಸಚಿವ ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಭಾರತ ಮಾತೆಗೆ ಜೈ ಎಂದು ಪ್ರತಿಪಕ್ಷಗಳ ಶಾಸಕರು ಘೋಷಣೆ ಕೂಗಿ ಮೊಗಸಾಲೆಗೆ ಪ್ರವೇಶಿಸಲು ಮುಂದಾದರು. ಮಾರ್ಷಲ್‌ಗಳು ಬಲವಾಗಿ ತಡೆದ ಪರಿಣಾಮ ಕೋಪಗೊಂಡ ಪ್ರತಿಪಕ್ಷಗಳ ಶಾಸಕರು, ಮಾರ್ಷಲ್‌ಗಳ ಜೊತೆಗೇ ವಾಗ್ವಾದ ನಡೆಸಿದರು. ಕೆಲ ಹೊತ್ತಿನ ಜಟಾಪಟಿ ಬಳಿಕ ವಿಧಾನಸಭೆಯ ಮೊಗಸಾಲೆ ಪ್ರವೇಶಿಸಿದರು. ನಂತರ ಕಪ್ಪು ಟೀ ಶರ್ಟ್‌ ಧರಿಸಿಯೇ ಸದನದಲ್ಲಿ ಕುಳಿತರು.ಕಪ್ಪು ಬಣ್ಣದ ಟೀ ಶರ್ಟ್‌ ಧರಿಸಿ ಕಲಾಪದಲ್ಲಿ ಭಾಗಿಯಾಗುವುದು ಸರಿಯಲ್ಲ. ಟೀ ಶರ್ಟ್‌ ಬಿಚ್ಚಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಮನವಿ ಮಾಡಿದರು. ಟೀ ಶರ್ಟ್ ಬಿಚ್ಚಲು ಒಪ್ಪಿಕೊಂಡ ವಿಪಕ್ಷಗಳ ನಾಯಕರು, ಪ್ರತಿಭಟನೆ ಮಾತ್ರ ಕೈಬಿಡುವುದಿಲ್ಲ ಎಂದು ಹೇಳಿ ಹೊರಬಂದರು.ಕಪ್ಪು ಟೀ ಶರ್ಟ್‌ ವಿಚಾರ-ಸ್ಪೀಕರ್ ಸಂಧಾನ:ಬಿಜೆಪಿ-ಜೆಡಿಎಸ್‌ ಶಾಸಕರು ಕಪ್ಪು ಟೀ ಶರ್ಟ್ ಧರಿಸಿ ಸದನಲ್ಲಿ ಆಸೀನರಾಗಿದ್ದರಿಂದ ಸ್ಪೀಕರ್ ನಿಗದಿತ ಸಮಯಕ್ಕೆ ಕಲಾಪ ಆರಂಭಿಸಲಿಲ್ಲ. ಕಲಾಪ ಆರಂಭಕ್ಕೂ ಮುನ್ನ ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಅವರು ಸಂಧಾನ ಸಭೆ ನಡೆಸಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಶಾಸಕರಾದ ಸುನೀಲ್ ಕುಮಾರ್, ಸಿ.ಸಿ.ಪಾಟೀಲ್ ಮತ್ತು ಸರ್ಕಾರದ ಪರ ಸಚಿವ ಯು.ಟಿ.ಖಾದರ್‌ ಈ ಸಂಧಾನ ಸಭೆಯಲ್ಲಿ ಭಾಗವಹಿಸಿದ್ದರು. ಕಪ್ಪು ಬಣ್ಣದ ಟೀ ಶರ್ಟ್‌ ಧರಿಸಿ ಕಲಾಪದಲ್ಲಿ ಭಾಗಿಯಾಗುವುದು ಸರಿಯಲ್ಲ. ಟೀ ಶರ್ಟ್‌ ಬಿಚ್ಚಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಮನವಿ ಮಾಡಿದರು. ಟೀ ಶರ್ಟ್ ಬಿಚ್ಚಲು ಒಪ್ಪಿಕೊಂಡ ವಿಪಕ್ಷಗಳ ನಾಯಕರು, ಪ್ರತಿಭಟನೆ ಮಾತ್ರ ಕೈಬಿಡುವುದಿಲ್ಲ ಎಂದು ಹೇಳಿ ಹೊರಬಂದರು. ಅದರಂತೆ ಟೀ ಶರ್ಟ್‌ ಬಿಚ್ಚಿ ಬಳಿಕ ಸದನಕ್ಕೆ ಬಂದರು. ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸದನ ಈ ಕಪ್ಪು ಟೀ ಶರ್ಟ್‌ ಕಾರಣಕ್ಕೆ ಮಧ್ಯಾಹ್ನ 12.30ಕ್ಕೆ ಆರಂಭವಾಯಿತು.ರಾಜೀನಾಮೆ ಬೇಡಿಕೆ ಮಧ್ಯೆಯೇ ನಾಗೇಂದ್ರಗೆ ಹೆಚ್ಚುವರಿ ಹೊಣೆ:

ವಿಧಾನಮಂಡಲದ ಉಭಯ ಸದನಗಳಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ರಾಜ್ಯ ಸರ್ಕಾರ ನಾಗೇಂದ್ರ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿರುವುದು ಮತ್ತಷ್ಟು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿ ಸದಸ್ಯ ಶಶಿಲ್ ನಮೋಶಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವ ನಾಗೇಂದ್ರ, 2025ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ ರಚಿಸಲಾಗಿದ್ದು, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರೇ ಈ ಸಚಿವಾಲಯದ ಸಚಿವರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ಸಚಿವಾಲಯದ ಅಧೀನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಾರ್ಯನಿರ್ವಹಿಸುತ್ತಿದೆ.ಸಚಿವಾಲಯದ ಕಾರ್ಯನಿರ್ವಹಣೆಗೆ ಒಟ್ಟು 16 ಹುದ್ದೆಗಳನ್ನು ಸರ್ಕಾರ ಮೀಸಲಿಟ್ಟಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಸಂಬಂಧಿತ ಆಡಳಿತಾತ್ಮಕ ಕಾರ್ಯಗಳನ್ನು ಈ ಸಚಿವಾಲಯದ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.