ಸಾರಾಂಶ
ಗಜೇಂದ್ರಗಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಲೋಕಾಯುಕ್ತ ಪಿಐ ಪರಮೇಶ್ವರ ಕವಟಗಿ ನೇತೃತ್ವದ ತಂಡವು ಅನಿರೀಕ್ಷಿತ ಭೇಟಿ ನೀಡಿದಾಗ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಗೈರು ಹಾಗೂ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡು ಬಂದಿದೆ.
ಗಜೇಂದ್ರಗಡ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಲೋಕಾಯುಕ್ತ ಪಿಐ ಪರಮೇಶ್ವರ ಕವಟಗಿ ನೇತೃತ್ವದ ತಂಡವು ಅನಿರೀಕ್ಷಿತ ಭೇಟಿ ನೀಡಿದಾಗ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಗೈರು ಹಾಗೂ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡು ಬಂದಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿಗಳು ಹಾಜರಿ ಪುಸಕ್ತದಲ್ಲಿ ಸಹಿ ಮಾಡದೇ ಇರುವುದು ಮತ್ತು ಕರ್ತವ್ಯಕ್ಕೆ ಗೈರಾಗಿದ್ದು ಕಂಡು ಬಂದಿದೆ. ತುರ್ತು ಚಿಕಿತ್ಸಾ ಘಟಕ ಸರಿಯಾಗಿ ನಿರ್ವಹಣೆ ಮಾಡದ್ದು, ಎಲ್ಲೆಂದರಲ್ಲಿ ನಿರುಪಯುಕ್ತ ಸಾಮಗ್ರಿಗಳನ್ನು ಎಸೆದಿದ್ದು, ಆಸ್ಪತ್ರೆಯಲ್ಲಿ ಉಪಯೋಗಿಸಿದ ತ್ಯಾಜ್ಯಗಳು ವಿಲೇವಾರಿ ಮಾಡದ್ದು, ರಕ್ತ ತಪಾಸಣಾ ಪ್ರಯೋಗಾಲಯದಲ್ಲಿ ಹಲವಾರು ಮಷಿನ್‌ಗಳು ಧೂಳು ಹಿಡಿದಿದ್ದು ಅಧಿಕಾರಿಗಳ ಬೇಸರಕ್ಕೆ ಕಾರಣವಾಯಿತು. ಹೆರಿಗೆಯಾದ ಮಹಿಳೆಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲದ್ದು, ಆರೋಗ್ಯ ಕೇಂದ್ರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಯಿಲ್ಲದ ಪರಿಣಾಮ ರೋಗಿಗಳು ನೀರಿಗಾಗಿ ಪರದಾಡುವುದು ಹಾಗೂ ಶೌಚಾಲಯಕ್ಕೆ ಕೀಲಿ ಜಡಿಯಲಾಗಿತ್ತು. ಪಟ್ಟಣ ಸೇರಿ ಸುತ್ತಲಿನ ಇಪ್ಪತ್ತು ಅಧಿಕ ಗ್ರಾಮಗಳ ರೋಗಿಗಳು ತಪಾಸಣೆ, ಹೆರಿಗೆ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಸಮುದಾಯ ಆರೋಗ್ಯ ಕೇಂದ್ರವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಗೈರಾಗಿರುವುದರ ಪರಿಣಾಮ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಕಾಯುವ ದುಸ್ಥಿತಿ ಎಂಬ ದೂರುಗಳು ಒಂದೆಡೆಯಾದರೆ ಇತ್ತ ಆರೋಗ್ಯ ಕೇಂದ್ರ ಸ್ವಚ್ಚತೆ ಮರೀಚಿಕೆಯಾದರೆ, ಕುಡಿಯುವ ನೀರು ಹಾಗೂ ಶೌಚಾಲಯ ಅಸಮರ್ಪಕ ನಿರ್ವಹಣೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿಯಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದವು. ಅವ್ಯವಸ್ಥೆ ಪಟ್ಟಿ ಮಾಡಿರುವ ಲೋಕಾ ಅಧಿಕಾರಿಗಳುಪಟ್ಟಣದಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಗಜೇಂದ್ರಗಡ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಕರ್ತವ್ಯನಿರತ ವೈದ್ಯರು ಹಾಗೂ ಸಿಬ್ಬಂದಿ ಗೈರು ಹಾಗೂ ಬೆಡ್ ಮೇಲಿನ ಬೆಡ್‌ಶೀಟ್ ಹಾಗೂ ತಲೆದಿಂಬು ಗಲೀಜು ಸೇರಿ ಅವ್ಯವಸ್ಥೆ ಪಟ್ಟಿ ಮಾಡಿದ್ದಾರೆ. ತಾಲೂಕಾಡಳಿತ ಸರ್ಕಾರಿ ಸಮುದಾಯ ಕೇಂದ್ರಕ್ಕೆ ಲಕ್ಷಾಂತರ ಹಣವನ್ನು ಸುರಿಯುತ್ತಿದೆ. ಆದರೆ ಸಮುದಾಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸೌಲಭ್ಯಗಳು ದೊರೆಯುತ್ತಿಲ್ಲ ಎನ್ನುವ ದೂರಿಗೆ ಇಂಬು ನೀಡಿದಂತಾಗಿದೆ. ಇನ್ನಾದರೂ ತಾಲೂಕಾಡಳಿತ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಿಸಿ ಮುಟ್ಟಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯ ದೊರಕಿಸಿಕೊಡಲು ಮುಂದಾಗುತ್ತಾ ಎಂದು ಕಾದು ನೋಡಬೇಕಿದೆ.ಈ ವೇಳೆ ಜಿಲ್ಲಾ ಲೋಕಾಯುಕ್ತ ಪಿಐ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿ ಟಿ.ಎನ್. ಜವಳಿ, ಎ.ಬಿ. ಅರಿಶಿಣದ, ಎಂ.ಎಸ್. ದಿಗಡೂರ, ಆರ್.ಎಂ. ಹಳ್ಳಳ್ಳಿ ಇದ್ದರು.