ರಾಜ್ಯೋತ್ಸವಕ್ಕೆ ಶಾಸಕರ ಗೈರು: ಸಾರ್ವಜನಿಕರ ಬೇಸರ

| Published : Nov 02 2023, 01:00 AM IST

ಸಾರಾಂಶ

ನಾಡಿನಾದ್ಯಂತ ಅದ್ದೂರಿಯಾಗಿ ಶಾಸಕರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದರೂ ತಾಲೂಕಿನಲ್ಲಿ ಮಾತ್ರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾಕ್ಕೆ ತೆರಳಿರುವುದರಿಂದ ಗೈರಿನಲ್ಲಿ ನಾಡಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಪಾಂಡವಪುರ: ನಾಡಿನಾದ್ಯಂತ ಅದ್ದೂರಿಯಾಗಿ ಶಾಸಕರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದರೂ ತಾಲೂಕಿನಲ್ಲಿ ಮಾತ್ರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾಕ್ಕೆ ತೆರಳಿರುವುದರಿಂದ ಗೈರಿನಲ್ಲಿ ನಾಡಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಸ್ವಾತಂತ್ರ್ಯ ದಿನಾಚರಣೆಯಂದು ಗೈರಾಗಿದ್ದರು. ಈಗ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೂ ಗೈರು ಹಾಜರಾಗಿದ್ದರಿಂದ ಕ್ಷೇತ್ರದ ಜನತೆ ಶಾಸಕರ ನಡೆಗೆ ಅಸಮಧಾನ ವ್ಯಕ್ತಪಡಿಸಿದರು. ನಾಡಹಬ್ಬ, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸುವುದು ಕ್ಷೇತ್ರದ ಶಾಸಕರ ಜವಾಬ್ದಾರಿ, ಕರ್ತವ್ಯವಾಗಿದೆ. ಆದರೆ, ನಮ್ಮ ಕ್ಷೇತ್ರದ ಶಾಸಕರಿಗೆ ನಾಡಹಬ್ಬ, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸದೇ ಅಮೆರಿಕಾ ಪ್ರವಾಸದಲ್ಲಿರುವುದು ಕ್ಷೇತ್ರದ ಜನರಿಗೆ ಬೇಸರ ತರಿಸಿದೆ. ಶಾಸಕರು ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಅಗೌರವ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೂ ಸಹ ಗೈರು ಹಾಜರಾಗಿದ್ದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ವಿರುದ್ದ ಕ್ಷೇತ್ರದ ಜನತೆ ಸಾಕಷ್ಟು ಟೀಕೆ ಮಾಡಿದ್ದರು. ಬಳಿಕ ಅಮೆರಿಕದಿಂದ ಬಂದ ದರ್ಶನ್‌ ಪುಟ್ಟಣ್ಣಯ್ಯ ಸುದ್ದಿಗೋಷ್ಠಿ ನಡೆಸಿ ಕ್ಷೇತ್ರದ ಜನರ ಕ್ಷಮೆಯಾಚಿಸಿದ್ದರು. ಮತ್ತೊಮ್ಮೆ ಈ ರೀತಿಯಾಗಿ ನಡೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದ್ದರು. ಅದಾದ ನಂತರ ಬಂದ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೂ ಸಹ ಗೈರು ಹಾಜರಾಗಿರುವ ಶಾಸಕರ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಶಾಸಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಕಿಡಿಕಾರಿದ್ದಾರೆ.