ಹಿತರಕ್ಷಣಾ ಸಮಿತಿ ತ್ರೈಮಾಸಿಕ ಸಭೆಗೆ ಅಧಿಕಾರಿಗಳ ಗೈರು: ಸದಸ್ಯರು ಗರಂ

| Published : Mar 02 2024, 01:49 AM IST

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆಯಲ್ಲಿ ಸಮಿತಿ ಸದಸ್ಯರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆಯಲ್ಲಿ ಸಮಿತಿ ಸದಸ್ಯರು ಒತ್ತಾಯಿಸಿದರು.

ತಹಸೀಲ್ದಾರ್ ನವೀನ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯ ಬಿ.ಈ.ಜಯೇಂದ್ರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಗೆ ಉದ್ದೇಶ ಪೂರ್ವಕವಾಗಿ ಗೈರಾಗುತ್ತಿದ್ದಾರೆ. ಅದರಲ್ಲೂ ಎಡಿಎಲ್‍ಆರ್ ಬರುತ್ತಿಲ್ಲ. ಪರಿಶಿಷ್ಟ ಜಾತಿಯವರಿಗೆ ಆಸ್ತಿ ದುರಸ್ತಿ ಮಾಡಿಕೊಡುತ್ತಿಲ್ಲ. ಅಟ್ರಾಸಿಟಿ ಮೊಕದ್ದಮೆಗಳ ತನಿಖೆಯ ಬಗ್ಗೆ ಡಿವೈಎಸ್‍ಪಿ ಅವರನ್ನು ಪ್ರಶ್ನಿಸಲು ಅವರು ಬರುತ್ತಿಲ್ಲ ಎಂದು ಆರೋಪಿಸಿದರು.ಪ್ರತಿ ಸಭೆಗಳು ಕಾಟಚಾರಕ್ಕೆ ನಡೆಯುತ್ತಿವೆ. ಯಾವುದೇ ಅನುಪಾಲನ ವರದಿಯನ್ನು ಸಭೆಗೂ ಮುನ್ನ ನೀಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಗೈದರು.

ವಿವಿಧ ಇಲಾಖಾಧಿಕಾರಿಗಳಿಗೆ ಸಭಾ ಸೂಚನ ಪತ್ರ ನೀಡಲಾಗಿದೆ. ಗೈರಾದವರಿಗೆ ಷೋಕಸ್ ನೋಟಿಸ್ ನೀಡಲಾಗುವುದು. ಗೈರಾದ ಇಲಾಖಾಧಿಕಾರಿಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಲಿಖಿತವಾಗಿ ಕೊಟ್ಟರೆ, ಪ್ರತಿಯೊಂದು ಅರ್ಜಿಗಳನ್ನು 15 ದಿನಗಳ ಒಳಗೆ ವಿಲೇವಾರಿ ಮಾಡಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.

ಹೆಮ್ಮನೆ ಗ್ರಾಮದಲ್ಲಿ ಪೈಸಾರಿ ಜಾಗ ಒತ್ತುವರಿಯಾಗಿದೆ. ಅಂಗನವಾಡಿಗೆ ಕಟ್ಟಡ ಕಟ್ಟಲು ಜಾಗ ಇಲ್ಲದಂತಾಗಿದೆ ಎಂದು ಸದಸ್ಯರು ದೂರಿದರು. ಶನಿವಾರಸಂತೆ ಹೆಮ್ಮನೆ ಗ್ರಾಮದಲ್ಲಿ ಎಷ್ಟು ಪೈಸಾರಿ ಜಾಗವಿತ್ತು. ಒತ್ತುವರಿ ಮಾಡಿಕೊಂಡವರ ಪಟ್ಟಿ, ಉಳಿದಿರುವ ಪೈಸಾರಿ ಜಾಗ ಎಷ್ಟಿದೆ ಎಂಬ ಮಾಹಿತಿ ಕೂಡಲೆ ನೀಡುವಂತೆ ಸಂಬಂಧಪಟ್ಟ ಕಂದಾಯ ಅಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು.

ಕಂದಾಯ ಇಲಾಖೆಯಲ್ಲಿ ಎಸ್.ಸಿ. ಎಸ್.ಟಿ.ಗಳ ಅರ್ಜಿಗಳು ಧೂಳು ತಿನ್ನುತ್ತಿವೆ. ನಮ್ಮ ಕೆಲಸಗಳು ಆಗುತ್ತಿಲ್ಲ. ಆಸ್ತಿವಂತರ ದುರಸ್ತಿ ಕಡತಗಳು ವಿಲೇವಾರಿಯಾಗುತ್ತಿವೆ ಎಂದು ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ಕೆಂಚೇಶ್ವರ ದೂರಿದರು.ಕರ್ಕಳ್ಳಿ ಬಾಣೆ ಸ್ಮಶಾನ ಸಮಸ್ಯೆ:

ಕರ್ಕಳ್ಳಿ ಬಾಣೆಯಲ್ಲಿ ಅತೀ ಕಡಿಮೆ ಸಾರ್ವಜನಿಕ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಕೆಲವರು ಕಸವನ್ನು ಸ್ಮಶಾನ ಜಾಗದಲ್ಲಿ ಸುರಿಯುತ್ತಿದ್ದಾರೆ. ಗಬ್ಬೆದ್ದು ನಾರುತ್ತಿದೆ. ಪಾರ್ಥಿವ ಶರೀರ ಅಂತ್ಯಕ್ರಿಯೆ ಕಷ್ಟವಾಗುತ್ತಿದೆ ಎಂದು ಎಸ್.ಆರ್.ವಸಂತ್ ಹೇಳಿದರು. ಕೂಡಲೆ ಸ್ಥಳಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.

ದೊಡ್ಡಭಂಡಾರ ಗ್ರಾಮದ ಸ್ಮಶಾನ ಜಾಗದ ಹದ್ದುಬಸ್ತು ಸರ್ವೇ ಮಾಡಿಸಿಕೊಡಬೇಕೆಂದು ವೇದಕುಮಾರ್ ಮನವಿ ಮಾಡಿದರು. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಎಸ್.ಸಿ.ಮೀಸಲಾತಿ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ವಿಶೇಷ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸದ ಪಿಡಿಒಗಳ ವಿರುದ್ಧ ಅಟ್ರಾಸಿಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವಂತೆ ಒತ್ತಾಯಸಿದರು. ಪ್ರತಿ ಎಸ್.ಸಿ.ಕುಟುಂಬಗಳ ಜಾಗದ ಪ್ಲಾನಿಂಗ್ ದುರಸ್ತಿ ಮಾಡುವಂತೆ ಮನವಿ ಮಾಡಿಕೊಂಡರು.

ಕೊಡ್ಲಿಪೇಟೆ ಹೋಬಳಿ ಕಂದಾಯ ಇಲಾಖೆಯಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಕಂದಾಯ ಅಧಿಕಾರಿಗಳು ಗೂಟ ಹೊಡೆದುಕೊಂಡು ಕುಳಿತ್ತಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ನಿಜವಾದ ಎಸ್.ಸಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಕ್ರಮ ಎಸಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೇವರಾಜ್ ಒತ್ತಾಯಿಸಿದರು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಭರವಸೆ ನೀಡಿದರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.