ಸಭೆಗೆ ವಿವಿಧ ವಿಭಾಗದ ಅಧಿಕಾರಿಗಳ ಗೈರು: ಆರೋಪ

| Published : Nov 23 2025, 02:15 AM IST

ಸಾರಾಂಶ

ತರೀಕೆರೆವಸತಿ ಸೇರಿ ವಿವಿಧ ವಿಭಾಗದ ಅಧಿಕಾರಿಗಳು ಈವರೆಗೆ ಪುರಸಭೆಯಲ್ಲಿ ನಡೆದಿರುವ ಒಂದು ಸಾಮಾನ್ಯ ಸಭೆಗೂ ಬಂದಿಲ್ಲ ಎಂದು ಸದಸ್ಯ ಟಿ.ಎಂ.ಭೋಜರಾಜ್ ಆರೋಪಿಸಿದರು.

೨೦೨೩-೨೪ನೇ ಸಾಲಿನ ಆಡಿಟ್ ವರದಿಯಲ್ಲಿ ನ್ಯೂನ್ಯತೆ । ಸರ್ವ ಸದಸ್ಯರ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ವಸತಿ ಸೇರಿ ವಿವಿಧ ವಿಭಾಗದ ಅಧಿಕಾರಿಗಳು ಈವರೆಗೆ ಪುರಸಭೆಯಲ್ಲಿ ನಡೆದಿರುವ ಒಂದು ಸಾಮಾನ್ಯ ಸಭೆಗೂ ಬಂದಿಲ್ಲ ಎಂದು ಸದಸ್ಯ ಟಿ.ಎಂ.ಭೋಜರಾಜ್ ಆರೋಪಿಸಿದರು.

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಬಂಡತನ ಪ್ರದರ್ಶಿಸುವ ಇಂಥ ಅಧಿಕಾರಿಗಳ ನಡೆ ಪುರಸಭೆ ಆಡಳಿತ ವೈಫಲ್ಯ ತೋರಿಸುವಂತಿದ್ದು, ಕೂಡಲೇ ನೋಟಿಸ್ ನೀಡಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಸದಸ್ಯ ಪರಮೇಶ್ ಮಾತನಾಡಿ, ೨೦೨೩-೨೪ನೇ ಸಾಲಿನ ಆಡಿಟ್ ವರದಿಯಲ್ಲಿ ನ್ಯೂನ್ಯತೆಯಿಂದೆ. ವರದಿಯಲ್ಲಿ ಸಕಾರಾತ್ಮಕ ಅಂಶಗಳು ಕಂಡು ಬಂದಿವೆ. ಆಡಿಟ್ ವರದಿ ಕಾಟಾಚಾರಕ್ಕೆ ತಯಾರಿಸಿದಂತಿದ್ದು, ಇಂಥ ವರದಿ ಸಭೆಯಲ್ಲಿ ಮಂಡಿಸುವುದು ಸರಿಯಲ್ಲ ಎಂದು ಹೇಳಿದರು.ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ, ಲಕ್ಷಾಂತರ ರು. ಆಡಿಟ್ ಫೀಜು ನೀಡಿ ತಯಾರಿಸಿರುವ ವರದಿ ಹಲವು ಲೋಪಗಳಿಂದ ಕೂಡಿದ್ದು, ಮಂಡನೆ ಮುಂದೂಡುವಂತೆ ಒತ್ತಾಯಿಸಿದರು.ಸದಸ್ಯ ಟಿ.ಜಿ. ಅಶೋಕ್‌ಕುಮಾರ್ ಮಾತನಾಡಿ, ವಾರದ ಸಂತೆ ಮೈದಾನಕ್ಕೆ ಎಪಿಎಂಸಿ ೩೦ ವರ್ಷದ ಅವಧಿಗೆ ೨ ಎಕರೆ ಜಾಗ ರೈತರು ಬೆಳೆದ ಉತ್ಪನ್ನ ಮಾರಾಟ ಮಾಡಲು ಲೀಸಿಗೆ ನೀಡಿದೆ. ಅಲಿ ಸಮುದಾಯ ಶೌಚಗೃಹ ನಿರ್ಮಿಸಿ ೧೫ ವರ್ಷ ಕಳೆದಿದೆ. ಆದರೆ ಅದರ ಬಳಕೆಯಾಗುತ್ತಿಲ್ಲ. ಈ ನಡುವೆ ನಗರೋತ್ಥನಾ ಯೋಜನೆ ೪ನೇ ಹಂತದ ಅನುದಾನದಲ್ಲಿ ಅಂಗವಿಕಲರ ಶೌಚಗೃಹ ನಿರ್ಮಿಸಲು ಹೊರಟಿರುವುದು ಸರಿಯಲ್ಲ. ಉಳಿದ ಜಾಗದಲ್ಲೆಲ್ಲ ಶೌಚಾಲಯಗಳನ್ನೇ ನಿರ್ಮಿಸುತ್ತಾ ಹೋದರೆ ಸಂತೆ ಮೈದಾನಕ್ಕೆ ಮೀಸಲಿಟ್ಟ ಜಾಗ ಉಳಿಯುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.ಸದಸ್ಯ ಟಿ.ಎಂ.ರಂಗನಾಥ್ ಮಾತನಾಡಿ, ೬ನೇ ವಾರ್ಡಿನಲ್ಲಿ ೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಯೋಜನೆಯಲ್ಲಿ ಹಿಂದಿದ್ದ ಕೊಳವೆ ಬಾವಿ ಮರು ಕೊರೆಸಲಾಗಿದೆ. ಕಳವೆ ಬಾವಿ ಕೊರೆಸಲು, ಮೋಟಾರ್ ಅಳವಡಿಸಿ ಪೈಪ್‌ಲೈನ್ ಮಾಡುವ ಕಾಮಗಾರಿಗೆ ₹೩.೮೮ ಲಕ್ಷ ಪಾವತಿಸಬೇಕಾಗಿತ್ತು. ಆದರೆ ಒಂದೇ ಕಾಮಗಾರಿಗೆ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಎರಡು ಬಾರಿ ಬಿಲ್ ಮಾಡಿರುವುದು ಅವ್ಯವಹಾರದ ಶಂಕೆ ಮೂಡಿಸಿದೆ ಎಂದರು. ಮಧ್ಯಪ್ರವೇಶಿಸಿದ ಸದಸ್ಯ ಟಿ.ಜಿ.ಶಶಾಂಕ್ ಈ ವಿಷಯ ನಡಾವಳಿಯಲ್ಲಿ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾದಾಗಿನಿಂದ ಮಹಾತ್ಮ ಗಾಂಧಿ ವೃತ್ತದಿಂದ ತಾಲೂಕು ಕಚೇರಿವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಲೈಟಿಲ್ಲ. ಇದರಿಂದ ರಾತ್ರಿ ಹೊತ್ತು ಓಡಾಡುವ ಜನರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಸದಸ್ಯ ಟಿ.ಜಿ.ಭೋಜರಾಜ್ ಮಾತನಾಡಿ, ವಿದ್ಯುತ್ ಕಂಬದಲ್ಲಿದ್ದ ಲೈಟ್‌ಗಳು, ಬೆಲೆಬಾಳುವ ತಾಮ್ರದ ತಂತಿಗಳು ಮಾಯ ವಾಗಿವೆ. ರಸ್ತೆ ಅಗಲೀಕರಣ ಕಾಮಗಾರಿ ಹೆಸರಲ್ಲಿ ೩೦ಕ್ಕೂ ಹೆಚ್ಚು ಬಾರಿ ವಿದ್ಯುತ್ ಕಡಿತಗೊಳಿಸಲಾಗಿದೆ. ಇದರಿಂದ ಉದ್ದಿಮೆ ದಾರರು, ವ್ಯಾಪಾರಸ್ಥರಿಗೆ ತೊಂದರೆ, ಕುಡಿಯುವ ನೀರಿನ ಪೂರೈಕೆಗೂ ಸಮಸ್ಯೆಯಾಗುತ್ತಿದೆ. ಪಟ್ಟಣದ ಅರ್ಧ ಭಾಗ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೇರಿದೆ. ಬಹುತೇಕ ಕಡೆ ನೂರಾರು ಮನೆ ನಿರ್ಮಾಣ ಮಾಡಲಾಗುತ್ತಿದೆ. ಆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರಾಪೇಕ್ಷಣಾ ಪತ್ರ ಪುರಸಭೆಯಿಂದ ತರಬೇಕೋ ಅಥವಾ ಸ್ಲಂ ಬೋರ್ಡಿನಿಂದ ತರಬೇಕೋ ಎಂಬ ಗೊಂದಲವಿದೆ. ಇದನ್ನು ಸಂಬಂಧಪಟ್ಟ ಇಲಾಖೆ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗೀತಾಗಿರಿರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಮುಖ್ಯಾಧಿಕಾರಿ ರಂಜನ್ ಸೇರಿ ವಿವಿಧ ವಾರ್ಡುಗಳ ಸದಸ್ಯರು ಮತ್ತು ಅಧಿಕಾರಿಗಳು ಹಾಜರಿದ್ದರು.ಪೋಟೋ : ಇದೆ.