ಗ್ರಾಮ ಸಭೆಗೆ ಅಧಿಕಾರಿಗಳ ಗೈರು, ಸಾರ್ವಜನಿಕರ ಆಕ್ಷೇಪ

| Published : Nov 20 2025, 01:15 AM IST

ಸಾರಾಂಶ

ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿರಾಲಿ ಗ್ರಾಪಂ ಗ್ರಾಮ ಸಭೆಯಲ್ಲಿ ಶಿರಾಲಿಯ ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಗ್ರಾಮ ಸಭೆಗೆ ಅಧಿಕಾರಿಗಳ ಗೈರಿಗೆ ಸಾರ್ವಜನಿಕರ ಆಕ್ಷೇಪ

ಕನ್ನಡಪ್ರಭ ವಾರ್ತೆ ಭಟ್ಕಳ

ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿರಾಲಿ ಗ್ರಾಪಂ ಗ್ರಾಮ ಸಭೆಯಲ್ಲಿ ಶಿರಾಲಿಯ ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಗ್ರಾಮ ಸಭೆಗೆ ಹೆದ್ದಾರಿ ಪ್ರಾಧಿಕಾರ, ಚಿಕ್ಕ ನೀರಾವರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಸಭೆಗೆ ಕರೆಸುವಂತೆ ಪಟ್ಟು ಹಿಡಿದರು.

ಸಭೆಯಲ್ಲಿ ಶಿರಾಲಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಸಂಜೆ ಸಮಯದಲ್ಲಿ ರೋಗಿಗಳನ್ನು ಬೇರೆ ಆಸ್ಪತ್ರೆ ಅಥವಾ ಭಟ್ಕಳಕ್ಕೆ ಕಳುಹಿಸುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಕೋಟೆಬಾಗಿಲು ಮತ್ತು ಹರ್ಕಲಿ ಭಾಗದಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದ್ದು, ಕೆಲಸ ಸರಿಯಾಗಿ ಮಾಡಿಲ್ಲ ಎಂದು ಸ್ಥಳೀಯ ರಾಮ ನಾಯ್ಕ ದೂರಿದಾಗ, ಪಂಚಾಯಿತಿ ಅಧ್ಯಕ್ಷ ಭಾಸ್ಕರ ದೈಮನೆ ಅಭಿಯಂತರರನ್ನು ಕರೆಯಿಸಿ ಸಮರ್ಪಕ ಕೆಲಸ ಮಾಡುವುದರ ಬಗ್ಗೆ ಸೂಚಿಸಲಾಗುವುದು ಎಂದರು. ಶಿರಾಲಿ ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ ಮತ್ತು ಸಂತೆ ಮಾರುಕಟ್ಟೆಯ ಹತ್ತಿರ ಪಾರ್ಕಿಂಗ್ ಸಮಸ್ಯೆ ಬಗ್ಗೆ ತಿಳಿಸಲಾಯಿತು.

ಎಸ್ಸಿ, ಎಸ್ಟಿ ಪಲಾನುಭವಿಗಳಿಗೆ ನೀಡುವ ವೈದ್ಯಕೀಯ ವೆಚ್ಚ, ಶಿಷ್ಯವೇತನ, ಮನೆ ದುರಸ್ತಿಗಳಿಗೆ ಮೊಗೇರ ಹಾಗೂ ಗೊಂಡ ಸಮಾಜದ ಅರ್ಜಿಗಳನ್ನ ಪುರಸ್ಕರಿಸದೇ ಇರುವ ಬಗ್ಗೆ ಗ್ರಾಪಂ ಮಾಜಿ ಸದಸ್ಯ ಯೋಗೇಶ್ ಮೊಗೇರ ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಉತ್ತರಿಸಿದ ಪಿಡಿಒ ತಾಲೂಕು ದೌರ್ಜನ್ಯ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತಕರಾರು ಇದ್ದು ತೀರ್ಮಾನ ಕೈಗೊಳ್ಳಲು ತೊಂದರೆಯಾಗಿದೆ ಎಂದರು.

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಗ್ರಾಮ ಸಭೆಯಲ್ಲಿ ಆರೋಗ್ಯಕರ ಚರ್ಚೆ ಆಗಿರುವುದು ಉತ್ತಮ ಬೆಳವಣಿಗೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆಗಿರುವ ಸಾರ್ವಜನಿಕ ಉಪಯೋಗಿ ಶೌಚಾಲಯ ನಿರ್ಮಾಣ, ಬಸ್ ತಂಗುದಾಣ ನಿರ್ಮಾಣ, ಮಳೆ ನೀರಿನಿಂದ ತೊಂದರೆಗೊಳಾಗುತ್ತಿದ್ದ ಪ್ರದೇಶಗಳಲ್ಲಿ ಚರಂಡಿಗಳ ನಿರ್ಮಾಣ, ಶಿರಾಲಿ ಸ್ಮಶಾನಕ್ಕೆ ಕಾಂಪೌಂಡ್, ಪಂಚಾಯಿತಿ ಆಸ್ತಿಗಳ ರಕ್ಷಣೆಗಳ ಬಗ್ಗೆ ಕ್ರಮ ವಹಿಸಿರುವ ಬಗ್ಗೆ ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ರೇವತಿ ರವಿಶಂಕರ್ ನಾಯ್ಕ್, ಅಂತೋನ್ ಡಿಕೋಸ್ಟ, ಹಿರಿಯ ಸದಸ್ಯರಾದ ಗಣಪತಿ ನಾಯಕ್ ನಜೀಬ್, ಅಬ್ದುಲ್ ಖಾದಿರ್, ಸುನೀತಾ ಹೆರೂರ್ ಕರ್, ಜನಾರ್ದನ್ ದೇವಾಡಿಗ, ಜಯರಾಜ್ ಮೊಗೇರ, ಅಣ್ಣಪ್ಪ ನಾಯ್ಕ, ಪಿಡಿಒ ಯಾದವ ನಾಯ್ಕ, ನೋಡಲ್ ಅಧಿಕಾರಿ ಸುಶೀಲ ಮೊಗೇರ, ಪ್ರಮುಖರಾದ ವೆಂಕಟೇಶ ಸಂಕ್ರು ನಾಯ್ಕ, ಪ್ರಭಾಕರ್ ನಾಯ್ಕ, ರಾಮ ನಾಯ್ಕ, ಲಕ್ಷ್ಮಣ್ ದೈಮನೆ, ಶಿವು ನಾಯ್ಕ, ಪ್ರಶಾಂತ್ ಶಿರಾಲಿ, ಆನಂದ ಶಿರೂರ್, ಮಾದೇವ ಬಾಕಡ್, ಚಂದು ಬಾಕಡ್, ನಾಗಪ್ಪ ನಾಯ್ಕ ಮುಂತಾದವರಿದ್ದರು. ಕಾರ್ಯದರ್ಶಿ ಅಮೃತ್ ಸ್ವಾಗತಿಸಿ ವಂದಿಸಿದರು.