ಅಧಿಕಾರಿಗಳ ಗೈರು: ಕುಂಜಿಲ ಗ್ರಾ.ಪಂ. ವಿಶೇಷ ಸಭೆ ಮುಂದೂಡಿಕೆ

| Published : Dec 11 2024, 12:46 AM IST

ಸಾರಾಂಶ

ನಾಲಡಿ ಸ.ಕಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ಕುಂಜಿಲ ಗ್ರಾಮ ಪಂಚಾಯಿತಿ ಗ್ರಾಮಸ್ಥರ ವಿಶೇಷ ಸಭೆಗೆ ಪಂಚಾಯಿತಿ ಅಧ್ಯಕ್ಷೆ ಪೊಂಗೆರ ಶಿಲ್ಪ ಅಧ್ಯಕ್ಷತೆಯಲ್ಲಿ ದಿನ ನಿಗದಿಯಾಗಿದ್ದರೂ ಅಧಿಕಾರಿಗಳ ಗೈರು ಹಾಜರಿಯಿಂದ ಸಭೆ ಮುಂದೂಡಿದ ಬೆಳವಣಿಗೆ ಮಂಗಳವಾರ ಜರುಗಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲಡಿ ಸ.ಕಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ಕುಂಜಿಲ ಗ್ರಾಮ ಪಂಚಾಯಿತಿ ಗ್ರಾಮಸ್ಥರ ವಿಶೇಷ ಸಭೆಗೆ ಪಂಚಾಯಿತಿ ಅಧ್ಯಕ್ಷೆ ಪೊಂಗೆರ ಶಿಲ್ಪ ಅಧ್ಯಕ್ಷತೆಯಲ್ಲಿ ದಿನ ನಿಗದಿಯಾಗಿದ್ದರೂ ಅಧಿಕಾರಿಗಳ ಗೈರು ಹಾಜರಿಯಿಂದ ಸಭೆ ಮುಂದೂಡಿದ ಬೆಳವಣಿಗೆ ಮಂಗಳವಾರ ಜರುಗಿತು.

ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ ಗ್ರಾಮದ ಸರ್ವೆ ಸಂಖ್ಯೆ 1/5ರ 241 ಹೆಕ್ಟೇರ್ ಮತ್ತು ನಾಲಡಿ ಗ್ರಾಮದ ಸರ್ವೆ ಸಂಖ್ಯೆ 2/1ರ 240 ಹೆಕ್ಟೇರ್ ಜಮೀನನ್ನು ಕರ್ನಾಟಕ ಅರಣ್ಯಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯ ಎಂದು ಘೋಷಿಸುವ ಕುರಿತು ಸರ್ಕಾರದಿಂದ ಆದೇಶ ಬಂದ ಹಿನ್ನೆಲೆ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕಾಗಿತ್ತು.

ನಿಗದಿತಿಂದ ಅರ್ಧ ಗಂಟೆ ತಡವಾಗಿ ಪ್ರಾರಂಭವಾದ ಸಭೆಗೆ ಹಿರಿಯ ಅಧಿಕಾರಿಗಳು ಬಾರದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಶೋಕ್ ಸಾಧ್ಯವಾದಷ್ಟು ಬೇಗನೆ ಸಂಬಂಧಿಸಿದ ಎಲ್ಲಾ ಹಿರಿಯ ಅಧಿಕಾರಿಯವರಿಗೆ ಪತ್ರದ ಮೂಲಕ ವ್ಯವಹರಿಸಿ ಕುಂಜಿಲ, ನಾಲಡಿ ಮತ್ತು ಯವಕಪಾಡಿ ಗ್ರಾಮಸ್ಥರನ್ನು ಸೇರಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು ಎಂದು ಘೋಷಿಸಿ ಸಭೆ ಮುಂದೂಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕೋಡಿಮಣಿಯಂಡ ಬೋಪಣ್ಣ, ಭರತ್ ಚಂದ್ರ ದೇವಯ್ಯ,

ಚೋಯಮಾಡಂಡ ಹರಿ ಮೊಣ್ಣಪ್ಪ, ಮುಂಡ್ರೋಟ್ ಮತ್ತು ಭಾಗಮಂಡಲ ವಲಯ ಅರಣ್ಯಾಧಿಕಾರಿ ಪರವಾಗಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿ ಜನಾರ್ದನ್ ಮತ್ತಿತರರಿದ್ದರು.