ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕ್ಷೇತ್ರದಲ್ಲಿ ಯುವಜನರಿಗೆ, ಅದರಲ್ಲೂ ವಿಜ್ಞಾನ ಪದವೀಧರರಿಗೆ, ಉತ್ತಮ ಉದ್ಯೋಗಾವಕಾಶಗಳಿದ್ದು, ಸ್ಥಳೀಯ ಯುವಕರು ಈ ಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಂಗಳೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹಾಗೂ ಮಂಗಳೂರು ವಲಯದ ಮುಖ್ಯ ಅಗ್ನಿಶಾಮಕ ಅಧಿಕಾರಿ (ಪ್ರಭಾರ) ಶಂಕರ್ ಎಂ. ಹೇಳಿದರು.

ಕನ್ನಡಪ್ರಭವಾರ್ತೆ ಮೂಡುಬಿದಿರೆ

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕ್ಷೇತ್ರದಲ್ಲಿ ಯುವಜನರಿಗೆ, ಅದರಲ್ಲೂ ವಿಜ್ಞಾನ ಪದವೀಧರರಿಗೆ, ಉತ್ತಮ ಉದ್ಯೋಗಾವಕಾಶಗಳಿದ್ದು, ಸ್ಥಳೀಯ ಯುವಕರು ಈ ಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಂಗಳೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹಾಗೂ ಮಂಗಳೂರು ವಲಯದ ಮುಖ್ಯ ಅಗ್ನಿಶಾಮಕ ಅಧಿಕಾರಿ (ಪ್ರಭಾರ) ಶಂಕರ್ ಎಂ. ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಶನಿವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಅಗ್ನಿಶಾಮಕ ಇಲಾಖೆಯ ಕಾರ್ಯವೈಖರಿ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗ್ನಿಶಾಮಕ ಇಲಾಖೆಯ ಇತಿಹಾಸ, ಇಲಾಖೆಯ ಶ್ರೇಣೀಕೃತ ವ್ಯವಸ್ಥೆ, ವಿವಿಧ ಹಂತಗಳಲ್ಲಿನ ಅಧಿಕಾರಿಗಳ ಜವಾಬ್ದಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಅಗ್ನಿ ಅವಘಡಗಳನ್ನು ನಿಯಂತ್ರಿಸುವುದಷ್ಟೇ ಅಲ್ಲದೆ, ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸ್ಥಳೀಯರು ಉದ್ಯೋಗ ಪಡೆಯಬೇಕು: ಅಗ್ನಿಶಾಮಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿದ್ದರೂ ಸ್ಥಳೀಯ ಯುವಕರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಬಿಎಸ್ಸಿ ರಸಾಯನಶಾಸ್ತ್ರ ವಿಜ್ಞಾನ ಪದವಿ ಪಡೆದವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಉತ್ತಮ ವೇತನ ಹಾಗೂ ವೃತ್ತಿ ಬೆಳವಣಿಗೆಗೆ ಅವಕಾಶವಿರುವುದರಿಂದ ಯುವಕರು ಈ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಅವರು ಹೇಳಿದರು.

ಸ್ಥಳೀಯರು ಅಗ್ನಿಶಾಮಕ ಸೇವಾ ಕ್ಷೇತ್ರಕ್ಕೆ ಪ್ರವೇಶಿಸಿದರೆ, ತಮ್ಮ ಪ್ರದೇಶದ ಭೌಗೋಳಿಕ ಪರಿಸ್ಥಿತಿ, ಜನಜೀವನ ಹಾಗೂ ಸ್ಥಳೀಯ ಸಮಸ್ಯೆಗಳ ಅರಿವು ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಉದ್ಯೋಗ ಪಡೆದು, ಸ್ಥಳೀಯರ ಸೇವೆ ಮಾಡುವ ಅವಕಾಶವನ್ನು ಯುವಕರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಅಗ್ನಿಶಾಮಕ ಸುರಕ್ಷತಾ ಸಾಧನಗಳ ಬಳಕೆ, ಬೆಂಕಿ ನಂದಿಸುವ ವಿಧಾನಗಳು ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶಂಕರ್ ಎಂ.ರವರನ್ನು ಗೌರವಿಸಲಾಯಿತು. ಮೂಡುಬಿದಿರೆಯ ಅಗ್ನಿಶಾಮಕ ಸಿಬ್ಬಂದಿಗಳು ಪ್ರಾಯೋಗಿಕ ಪ್ರತ್ಯಾಕ್ಷಿಕೆಯಲ್ಲಿ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯ ರೈ ಇದ್ದರು. ವೃಂದಾ ಕರ‍್ಯಕ್ರಮ ನಿರೂಪಿಸಿ ವಂದಿಸಿದರು.