ಸಾರಾಂಶ
ಭೀಮ್ ಆರ್ಮಿ ಸಂಘಟನೆಯ ಮುಖಂಡರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ದಲಿತ ಯುವಕನಿಗೆ ಬೆದರಿಕೆ ಹಾಕಿದ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಜಿಲ್ಲಾ ಭೀಮ್ ಆರ್ಮಿ ಸಮಿತಿ ವತಿಯಿಂದ ಹಿರೇಕೆರೂರು ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.
ಹಿರೇಕೆರೂರು: ಭೀಮ್ ಆರ್ಮಿ ಸಂಘಟನೆಯ ಮುಖಂಡರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ದಲಿತ ಯುವಕನಿಗೆ ಬೆದರಿಕೆ ಹಾಕಿದ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಜಿಲ್ಲಾ ಭೀಮ್ ಆರ್ಮಿ ಸಮಿತಿ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.
ಭೀಮ್ ಆರ್ಮಿ ಸಮಿತಿಯ ರಾಜ್ಯಾಧ್ಯಕ್ಷ ಮತಿನ್‌ಕುಮಾರ ಅಂಬೇಡ್ಕರ್ ಮಾತನಾಡಿ, ಪಟ್ಟಣದ ದಲಿತ ಸಮುದಾಯದ ವಿಜಯ್ ಮಾದರ ಎಂಬ ಯುವಕನು ಇನ್‌ಸ್ಟಾಗ್ರಾಂನಲ್ಲಿ ಅರಿಯದೇ ಸಂದೇಶ ರವಾನಿಸಿದ್ದಾನೆ. ಆ ಕಾರಣಕ್ಕೆ ಇಲ್ಲಿನ ಪಿಎಸ್‌ಐ ಅವರು ಸೆ. ೪ರಂದು ಠಾಣೆಗೆ ಕರೆತಂದು ಯುವಕನಿಗೆ ಜೀವ ಬೆದರಿಕೆ ಹಾಕಿ, ಅವಾಚ್ಯ ಪದಗಳಿಂದ ನಿಂದಿಸಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಅಲ್ಲದೆ ಮೊಬೈಲ್ ಕಸಿದುಕೊಂಡು ಬೆದರಿಕೆ ಒಡ್ಡಿದ್ದಾರೆ. ಆತನ ಪೋಷಕರು, ಭೀಮ್ ಆರ್ಮಿ ಮುಖಂಡರಿಗೂ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ಮತ್ತು ಮಾನವ ಹಕ್ಕು ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.ಸ್ಥಳಕ್ಕಾಗಮಿಸಿದ ರಾಣಿಬೆನ್ನೂರ ಡಿವೈಎಸ್‌ಪಿ ಗಿರೀಶ ಭೋಜನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು. ಭೀಮ್ ಆರ್ಮಿ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲೇಶ ನಿಂಗಮ್ಮನವರ, ಅಕ್ಷತಾ ಕೆ.ಸಿ., ಪ್ರವೀಣ ಸಣ್ಣನೀಲಪ್ಪನವರ, ಮಲ್ಲೇಶಪ್ಪ ಮೆಣಸಿನಾಳ, ಸಚಿನ್ ಮೆಣಸಿನಾಳ, ನವೀನ್ ಮೆಣಸಿನಾಳ, ಲಿಖಿತ ಮೆಣಸಿನಾಳ ಹಾಗೂ ಭೀಮ ಆರ್ಮಿ ಸಮೀತಿಯ ಪದಾಧಿಕಾರಿಗಳು, ದಲಿತ ಸಮಾಜದವರು ಇದ್ದರು.