ಬಿಜೆಪಿಯಿಂದ ಇಡಿ ಸಿಬಿಐ ದುರುಪಯೋಗ: ಜಗದೀಶ್ ಕಿಡಿ

| Published : Mar 23 2024, 01:04 AM IST

ಬಿಜೆಪಿಯಿಂದ ಇಡಿ ಸಿಬಿಐ ದುರುಪಯೋಗ: ಜಗದೀಶ್ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅರವಿಂದ್ ಕೇಜ್ರಿವಾಲ್‌ರವರು ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಚಿಂತನೆ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಅಂತವರನ್ನು ಬಿಜೆಪಿ ತುಳಿಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್‌ ದೂರಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡಿ, ಸಿಬಿಐಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಪ್ರತಿಪಕ್ಷಗಳ ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್‌ರವರು ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಚಿಂತನೆ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಅಂತವರನ್ನು ಬಿಜೆಪಿ ತುಳಿಯುತ್ತಿದೆ. ಕೇಜ್ರಿವಾಲ್ ರವರನ್ನು ಇಡಿಯವರು ಬಂಧಿಸಿರುವುದು ಸಂವಿಧಾನದ ಕಗ್ಗೊಲೆ. ಅಮ್ ಅದ್ಮಿ ಪಕ್ಷವನ್ನು ನಿರ್ನಾಮ ಮಾಡಲು ಬಿಜೆಪಿ ಸರ್ಕಾರ ಮಾಡಿರುವ ಕುತಂತ್ರ ಎಂದು ದೂರಿದರು.

ಬಿಜೆಪಿಯವರು ತಮಗೆ ಹೇಗೆ ಬೇಕೋ ಹಾಗೆ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಾರೆ. ಬ್ಲಾಕ್ ಮನಿಯನ್ನು ಅಕೌಂಟ್ ಮನಿಯಾಗಿ ಪರಿವರ್ತನೆ ಮಾಡಿ ಚುನಾವಣೆಗೆ ಬಳಸುತ್ತಿದ್ದಾರೆ. ಬಾಂಡ್ ಕೊಳ್ಳುವಿಕೆ ಕಾನೂನು ಬಾಹಿರ. ಇದು ದಾವುದ್ ಇಬ್ರಾಹಿಂ ರೀತಿಯಲ್ಲಿ ಹಫ್ತಾ ವಸೂಲಿ ನೀತಿ ಇದ್ದಹಾಗೆ. ಇದನ್ನು ಇಂದಿನ ಯಾವ ಸರ್ಕಾರಗಳು ಸಹ ಜಾರಿತಂದಿರಲಿಲ್ಲ. ಬಿಜೆಪಿ ಆಡಳಿತದ ವೇಳೆ ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಜನ ವಿರೋಧಿಯಾಗಿದೆ ಎಂದರು.

ಬಿಜೆಪಿಯವರು ಶ್ರೀರಾಮನನ್ನು ಆರಾಧಿಸುತ್ತಾರೆ. ಆದರೆ ಶ್ರೀ ರಾಮನ ಚಿಂತನೆಗಳನ್ನು ಅಳವಡಿಸಿಕೊಂಡಿಲ್ಲ. ಸರ್ಕಾರ ಸರಿದಾರಿಯಲ್ಲಿ ನಡೆಯಬೇಕಾದರೆ ವಿರೋಧ ಪಕ್ಷ ಬೇಕು. ವಿರೋಧ ಪಕ್ಷ ಇಲ್ಲದೇ ಇರುವ ಹಾಗೆ ಮಾಡುವ ಹುನ್ನಾರ ಬಿಜೆಪಿಯದು. ಇನ್ನೆರೆಡು ದಿನಗಳಲ್ಲಿ ಅರವಿಂದ ಕೇಜ್ರಿವಾಲ್‍ರವರ ಬಿಡುಗಡೆ ಮಾಡದಿದ್ದರೆ ಮಾರ್ಚ್ 25 ರಂದು ಪ್ರತಿಭಟನೆ ನಡೆಸಲಾಗುವುದೆಂದು ಜಗದೀಶ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜ್ಯೋತಿ, ವರಲಕ್ಷ್ಮೀ, ವಿನೋದಮ್ಮ, ತನ್ವೀರ್, ಲತಾ, ಶಿವಮ್ಮ, ಆಕ್ಬರ್, ಹೇಮಣ್ಣ ಇದ್ದರು.