ಗಂಡ-ಹೆಂಡತಿಯಿಂದ ಆರ್ಥಿಕ ಸ್ವಾವಲಂಬನೆ ದುರ್ಬಳಕೆ

| Published : Sep 15 2024, 01:51 AM IST

ಗಂಡ-ಹೆಂಡತಿಯಿಂದ ಆರ್ಥಿಕ ಸ್ವಾವಲಂಬನೆ ದುರ್ಬಳಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪತಿ-ಪತ್ನಿ ಸದ್ಯ ಆರ್ಥಿಕ ಸ್ವಾವಲಂಬನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರಲ್ಲಿ ಅಹಂಕಾರ, ಸ್ವ-ಪ್ರತಿಷ್ಠೆ ಹೆಚ್ಚಾಗಿ ಭಿನ್ನಾಭಿಪ್ರಾಯ ಉಂಟಾಗುತ್ತಿವೆ. ಆದರೆ, ಈ ವೇಳೆ ಕುಟುಂಬಸ್ಥರು ಹಾಗೂ ಆಪ್ತರಿಂದ ಸೂಕ್ತ ಮಾರ್ಗದರ್ಶನ, ಸಲಹೆಗಳು ಸಿಗುತ್ತಿಲ್ಲ.

ಹುಬ್ಬಳ್ಳಿ:

ಪ್ರಸ್ತುತ ಪತಿ-ಪತ್ನಿ ಇಬ್ಬರಿಗೂ ಆರ್ಥಿಕ ಸ್ವಾಲಂಬನೆ ಬಂದಿದೆ. ಇದರಿಂದ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಆರ್ಥಿಕ ಸ್ವಾವಲಂಬನೆಯನ್ನು ಸದ್ಬಳಕೆ ಮಾಡಿಕೊಂಡು ಸಂತೋಷದಿಂದ ಜೀವನ ಸಾಗಿಸುವ ಬಗ್ಗೆ ಯೋಚಿಸಿ ನೆಮ್ಮದಿ ಜೀವನಕ್ಕೆ ಆದ್ಯತೆ ನೀಡುವ ಕಾರ್ಯವಾಗಬೇಕಿದೆ ಎಂದು 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಅರಿ ಹೇಳಿದರು.

ಇಲ್ಲಿಯ ನೂತನ ನ್ಯಾಯಾಲಯ ಸಂಕೀರ್ಣದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತಿ-ಪತ್ನಿ ಸದ್ಯ ಆರ್ಥಿಕ ಸ್ವಾವಲಂಬನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರಲ್ಲಿ ಅಹಂಕಾರ, ಸ್ವ-ಪ್ರತಿಷ್ಠೆ ಹೆಚ್ಚಾಗಿ ಭಿನ್ನಾಭಿಪ್ರಾಯ ಉಂಟಾಗುತ್ತಿವೆ. ಆದರೆ, ಈ ವೇಳೆ ಕುಟುಂಬಸ್ಥರು ಹಾಗೂ ಆಪ್ತರಿಂದ ಸೂಕ್ತ ಮಾರ್ಗದರ್ಶನ, ಸಲಹೆಗಳು ಸಿಗುತ್ತಿಲ್ಲ. ಹೀಗಾಗಿ ವಿಚ್ಛೇದನಕ್ಕೆ ನ್ಯಾಯಾಲಯ ಮೆಟ್ಟಿಲೇರುತ್ತಿದ್ದಾರೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ಪ್ರೇಮಾಂಕುರಕ್ಕೆ ಸಿಲುಕಿ ವಿವಾಹವಾಗಿರುವ ಶೇ. 90ರಷ್ಟು ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೆಚ್ಚು ಆದ್ಯತೆ ನೀಡಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಂಡರೆ ಎಲ್ಲವೂ ತಾನಾಗಿಯೇ ಒಲಿದು ಬರಲಿದೆ ಎಂದರು.

ಹಿರಿಯ ವಕೀಲರಾದ ಎಸ್.ವಿ. ಕೊಪ್ಪರ, ಇರುವುದೊಂದೆ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು. ಪೀಳಿಗೆ ಬದಲಾದಂತೆ ಮನಸ್ಥಿತಿಯೂ ಬದಲಾಗುತ್ತಿದೆ. ಈ ವೇಳೆ ಮಕ್ಕಳಿಗೆ ಸಂಸ್ಕಾರ ನೀಡಿದರೆ ಸುಖಿ ಸಂಸಾರ ನಡೆಸಲಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ ಮಾತನಾಡಿದರು. ವಕೀಲರು ಮತ್ತು ಸಂಧಾನಕಾರ ಸಿ.ಎಸ್. ಸಜ್ಜನಶೆಟ್ಟರ, ವಕೀಲರಾದ ಮಹೇಶ ಹಿರೇಮಠ, ಕೆ. ಶೋಭಾ, ಎಸ್.ಐ. ಕೋರಿ ಸೇರಿದಂತೆ ಹಲವರಿದ್ದರು.