ಜೆಪಿಯಿಂದ ರಾಜ್ಯಪಾಲರ ಕಚೇರಿ ದುರ್ಬಳಕೆ

| Published : Oct 07 2024, 01:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮುಡಾಗೆ ನಿವೇಶನಗಳನ್ನು ವಾಪಸ್ ನೀಡಿದ್ದಾರೆ ಎಂದರೆ ಅದರಲ್ಲಿ ತಪ್ಪಾಗಿದೆ ಎಂದರ್ಥವಲ್ಲ. ಸಿಎಂ ಸಿದ್ಧರಾಮಯ್ಯನವರ ಪತ್ನಿಗೆ ಬಿಜೆಪಿ ಸರ್ಕಾರವಿದ್ದಾಗಲೇ ನಿವೇಶನಗಳನ್ನು ನೀಡಲಾಗಿದೆ. ಕಾನೂನು ಪ್ರಕಾರವೇ ನಿವೇಶನಗಳನ್ನು ನೀಡಿದ್ದಾರೆ ಎಂಬ ನಿಲುವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಡಾಗೆ ನಿವೇಶನಗಳನ್ನು ವಾಪಸ್ ನೀಡಿದ್ದಾರೆ ಎಂದರೆ ಅದರಲ್ಲಿ ತಪ್ಪಾಗಿದೆ ಎಂದರ್ಥವಲ್ಲ. ಸಿಎಂ ಸಿದ್ಧರಾಮಯ್ಯನವರ ಪತ್ನಿಗೆ ಬಿಜೆಪಿ ಸರ್ಕಾರವಿದ್ದಾಗಲೇ ನಿವೇಶನಗಳನ್ನು ನೀಡಲಾಗಿದೆ. ಕಾನೂನು ಪ್ರಕಾರವೇ ನಿವೇಶನಗಳನ್ನು ನೀಡಿದ್ದಾರೆ ಎಂಬ ನಿಲುವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

ಸಿಎಂ ಪತ್ನಿ ಮುಡಾ ನಿವೇಶನ ವಾಪಸ್ ನೀಡಿದ ವಿಚಾರ ಹಾಗೂ ವಿಪಕ್ಷ ನಾಯಕ ಆರ್‌.ಅಶೋಕ ಸಹ ನಿವೇಶನಗಳನ್ನು ವಾಪಸ್ ನೀಡಿದ ವಿಚಾರದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ, ಅದರರ್ಥ ತಪ್ಪಾಗಿದೆ ಎಂದಲ್ಲ ಎಂದರು.

ಆರ್‌.ಅಶೋಕ ಮುಂಚೆಯೇ ನಿವೇಶನಗಳನ್ನು ಕೊಟ್ಟಿದ್ಧಾರೆ. ಸಾರ್ವಜನಿಕರ ಜೀವನದಲ್ಲಿದ್ದಾಗ ಇಂಥ ಆರೋಪ ಬಂದಾಗ ವಾಪಸ್ ಕೊಡೋದು ಸಹಜ. ಆಗ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಟ್ಟಿದ್ದು. ಮುಡಾ ಕೂಡ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ. ಜಮೀನಿಗೆ ಬದಲಿಯಾಗಿ ನಿವೇಶಗಳನ್ನು ನೀಡಲಾಗಿದೆ, ಎಲ್ಲಿಯೂ ಅಕ್ರಮವಾಗಿದೆ ಎಂದು ಸ್ಪಷ್ಟನೆ ಇಲ್ಲ. ವಿರೋಧ ಪಕ್ಷವದರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಾನೂ ರಾಜೀನಾಮೆ ನೀಡುತ್ತೇನೆ ಎಂಬ ಆರ್‌.ಅಶೋಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್‌.ಅಶೋಕ ಏನಿದ್ದಾರೆ ಅಂತ ರಾಜೀನಾಮೆ ನೀಡುತ್ತಾರೆ. ಅವರು ಅಧಿಕಾರದಲ್ಲಿದ್ದಾಗ ರಾಜೀನಾಮೆ ನೀಡಬೇಕಿತ್ತು, ಈಗ ಕೇಳಬೇಕಿತ್ತು. ಸಿದ್ದರಾಮಯ್ಯ 42 ವರ್ಷಗಳ ರಾಜಕೀಯ ಬದುಕಿನಲ್ಲಿ ನಿಷ್ಕಳಂಕ ನಾಯಕ, ರಾಜ್ಯದ ಜನರ ಮನಸ್ಥಿತಿ ಬದಲಾಗುತ್ತದೆ ಎಂಬ ಭಯ ಬಿಜೆಪಿಯವರಿಗೆ ಇದೆ. ಪಿಎಂ ಮೋದಿ ಸಹ ಇದು ಅಸಾಧ್ಯವೆಂದು ಹೇಳಿದ್ದರು, ನಮ್ಮ ಸರ್ಕಾರ ಮೂರು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಇದನ್ನು ಸಹಿಸಿಕೊಳ್ಳದೇ ಬಿಜೆಪಿಯವರು ಈ ಪಿತೂರಿ ಮಾಡುತ್ತಿದ್ದಾರೆ ಎಂದರು.

ಸಿಎಂ ಆಗಲು ಕಾಂಗ್ರೆಸ್, ಬಿಜೆಪಿಯ ಕೆಲ ಮುಖಂಡರು ₹ 1000 ಕೋಟಿ ಹಣ ಸಂಗ್ರಹ ಮಾಡಿಕೊಂಡಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಯತ್ನಾಳ ಬಳಿ ಯಾವ ಮಾಹಿತಿ ಇದೆ ನನಗೆ ಗೊತ್ತಿಲ್ಲ, ಅವರು ಬಿಜೆಪಿಯ ಪ್ರಮುಖ ನಾಯಕರು. ಹಿಂದಿನ ಸರ್ಕಾರದಲ್ಲಿ 2019ರಲ್ಲಿ ಸರ್ಕಾರ ಬೀಳಿಸಲು ಬಹಳ ದೊಡ್ಡ ಹಣ ಉಪಯೋಗ ಆಗಿದೆ ಅಂತ ಎಲ್ಲರಿಗೂ ಗೊತ್ತು. ಸುಮಾರು 16 ರಿಂದ 17 ಶಾಸಕರು ರಾಜೀನಾಮೆ ನೀಡಿ ಚುನಾವಣೆ ಎದುರಿಸಿದರು. ಇದೆಲ್ಲ ಹಣದ ಬಲದ ಮೇಲೆ ಆಗಿದೆ, ಈಗಲೂ ಕೂಡ ಅದೇರೀತಿ ಪಿತೂರಿ ನಡೆಯುತ್ತಿರಬಹುದು ಎಂಬ ಶಂಕೆ ಇದೆ ಎಂದರು.

ಎಐಸಿಸಿ ಅಧ್ಯಕ್ಷರಿಗೆ ಶರಣಪ್ರಕಾಶ ಪಾಟೀಲ್ ಹಾಗೂ ಸಚಿವ ಸತೀಶ ಜಾರಕಿಹೊಳಿ ಭೇಟಿ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ದೆಹಲಿಗೆ ಹೋದ ಸಚಿವರು ಎಐಸಿಸಿ ಆಧ್ಯಕ್ಷರಿಗೆ ಭೇಟಿಯಾಗುತ್ತಾರೆ. ದೆಹಲಿಗೆ ಹೋದ ಸಚಿವರು ಭೇಟಿಯಾಗೋದು ಸಹಜ, ಇದಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯವಿಲ್ಲ. ದಲಿತ ಸಿಎಂ ಚರ್ಚೆ ವಿಚಾರದ ಕುರಿತು ಯಾವುದೇ ಮಾಹಿತಿ ಇಲ್ಲ. ಆ ರೀತಿಯ ಚಲನವಲನ ನಮ್ಮ ಗಮನಕ್ಕೆ ಬಂದಿಲ್ಲ, ಇದೆಲ್ಲಾ ಮಾದ್ಯಮಗಳ ಸೃಷ್ಟಿ. ದಲಿತ ಸಿಎಂ ಆಗೋ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋಟ್‌

ಬಿಜೆಪಿಯವರು ತಮ್ಮ ಆಡಳಿತದ ಅವಧಿಯಲ್ಲಿ ರಾಜ್ಯವನ್ನು ವ್ಯವಸ್ಥಿತವಾಗಿ ಲೂಟಿ ಹೊಡೆದಿದ್ದಾರೆ. ಅದಕ್ಕೆ ಜನರು ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಜನರಿಂದ ಚುನಾಯಿಸಲ್ಪಟ್ಟ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ದೊಡ್ಡ ದೊಡ್ಡ ಮಾತನಾಡುವರು ಇದನ್ನು ಗಮನಿಸುತ್ತಿಲ್ಲವೇ. ಇದರಿಂದ ರಾಜ್ಯದ ಜನರಿಗೆ ಹಾನಿಯಾಗುತ್ತದೆ.

ಶರಣ ಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ