ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರನ್ನು ದುರ್ಬಳಕೆ ಮಾಡಿಕೊಂಡು ಪಿಡಿಒ, ತಾಪಂ ನರೇಗಾ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗ್ರಾಪಂ ಸದಸ್ಯರಾದ ಕೆ.ಆರ್.ಅನಿಲ್‌ಕುಮಾರ್, ಹುಚ್ಚೇಗೌಡ ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಪಿ.ಲಕ್ಷ್ಮೀ ಅವರಿಗೆ ದೂರು ನೀಡಿದರು.ಈ ಅಧಿಕಾರಿಗಳು ತಗ್ಗಹಳ್ಳಿ ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ತಗ್ಗಹಳ್ಳಿ, ಕಮ್ಮನಾಯಕನಹಳ್ಳಿ, ಮಲ್ಲಿಗೆರೆ, ಕೋಲಕಾರನದೊಡ್ಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಲುವೆ ಅಭಿವೃದ್ಧಿ ಪಡಿಸುವುದಾಗಿ ಹಾಗೂ ಸಿಸಿ ಚರಂಡಿ ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆ ತಯಾರಿಸಿ ಕೂಲಿ ಕಾರ್ಮಿಕರಿಗೆ ಎನ್‌ಆರ್‌ಎಂ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಗ್ಗಹಳ್ಳಿ ಗ್ರಾಪಂ ಪಿಡಿಒ ತಮಗೆ ಬೇಕಾದವರನ್ನು ಮೇಟ್‌ಗಳನ್ನಾಗಿ ಮಾಡಿ ತಮಗೆ ಸಹಾಯ ಮಾಡುವವರ ಗುಂಪನ್ನು ಕಟ್ಟಿಕೊಂಡಿದ್ದಾರೆ. ಅವರನ್ನು ಎನ್‌ಎಂಎಂಎಸ್ ಆಪ್‌ನಲ್ಲಿ ಇಷ್ಟ ಬಂದಂತೆ ಫೋಟೋ ತೆಗೆಯಲು ಅವರಿಗೆ ಅವಕಾಶ ಮಾಡಿಕೊಟ್ಟು ಅವರನ್ನು ಅವಕಾಶ ಬಂದ ಹಾಗೆ ನಡೆಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕರ್ತವ್ಯದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.ಎನ್‌ಎಂಎಂಎಸ್ ಆಪ್‌ನಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸುವಂತೆ ದಾಖಲೆಗಳ ವಿವರಗಳನ್ನೆಲ್ಲಾ ಜಿಪಂ ಉಪ ಕಾರ್ಯದರ್ಶಿ ಅವರಿಗೆ ನೀಡಿದ್ದಾರೆ. ತಗ್ಗಹಳ್ಳಿ ಗ್ರಾಮದ ಲಿಂಗಯ್ಯನವರ ಗದ್ದೆಯಿಂದ ಯಲದಹಳ್ಳಿ ಮಂಜು ಗದ್ದೆಯವರೆಗೆ ಕಾಲುವೆ ಅಭಿವೃದ್ಧಿ, ತಗ್ಗಹಳ್ಳಿ ಗ್ರಾಮದ ಬಾಲರಾಜು ಗದ್ದೆಯಿಂದ ಮಾದೇಗೌಡರ ಜಮೀನಿನವರೆಗೆ ಕಾಲುವೆ ಅಭಿವೃದ್ಧಿ, ತಗ್ಗಹಳ್ಳಿ ಗ್ರಾಮದ ಟಿ.ಎಂ.ಪ್ರಸನ್ನರವರ ಗದ್ದೆಯಿಂದ ಕಬ್ಬನಹಳ್ಳಿ ಕೆರೆಯವರೆಗಿನ ಕಾಲುವೆ ಅಭಿವೃದ್ಧಿ, ತಗ್ಗಹಳ್ಳಿಯ ರೇವಣ್ಣ ಆರಾಧ್ಯರ ಗದ್ದೆಯಿಂದ ಟಿ.ಪಿ.ಸಿದ್ದೇಗೌಡರ ಪುಟ್ಟೇಗೌಡರ ಗದ್ದೆಯವರೆಗೆ ಕಾಲುವೆ ಅಭಿವೃದ್ಧಿ, ಮಲ್ಲೀಗೆರೆ ಗ್ರಾಮದ ವಿ.ಸಿ.ನಾಲೆ 14ನೇ ಗಿಡ್ಡದ ಗದ್ದೆಯಿಂದ ಕಿವಿ ಸಿದ್ದಯ್ಯನವರ ಗದ್ದೆಯವರೆಗೆ ಕಾಲುವೆ ಅಭಿವೃದ್ಧಿ, ತಗ್ಗಹಳ್ಳಿಯ ಹಳುವಾಡಿ ಮುಖ್ಯರಸ್ತೆಯಿಂದ ಮರೀಗೌಡರ ಗದ್ದೆಯವರೆಗಿನ ಕಾಲುವೆ ಅಭಿವೃದ್ಧಿ, ಕಮ್ಮನಾಯಕನಹಳ್ಳಿ ಮಾದೇಗೌಡರ ಆಲೆಮನೆಯಿಂದ ರವಿ ಅವರ ಖಾಲಿ ಜಾಗದವರೆಗೆ ಸಿಸಿ ಚರಂಡಿ ನಿರ್ಮಾಣ ಮಾಡಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.
ಕಾಲುವೆ ಅಭಿವೃದ್ಧಿ ಹಾಗೂ ಸಿಸಿ ಚರಂಡಿಗಳ ಕಾಮಗಾರಿಯಲ್ಲಿ ಅಕ್ರಮವಾಗಿರುವುದು ಕಂಡುಬಂದಿದ್ದು, ಉಳಿದ 2024-25ನೇ ಮತ್ತು 2025-26ನೇ ಸಾಲಿನ ಕಾಲುವೆ ಅಭಿವೃದ್ಧಿ, ಸಿಸಿ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಯಲ್ಲಿ ಅಕ್ರಮವೆಸಗಿರುವುದು ಕಂಡುಬಂದಿದ್ದು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.