ಕನ್ನಡಪ್ರಭ ವಾರ್ತೆ ಆನಂದಪುರ

ಇಲ್ಲಿಯ ಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರೆಯ ನೆಪದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ತಾಪಂ ಇಒ ಶಿವಪ್ರಕಾಶ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ಇತ್ತೀಚೆಗೆ ಆನಂದಪುರ ಗ್ರಾಮ ಪಂಚಾಯಿತಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಭೆಯಲ್ಲಿ ಗ್ರಾಪಂಯ ಮಾಜಿ ಅಧ್ಯಕ್ಷರು, ಸದಸ್ಯರನ್ನು ಕರೆಯದೇ ಸಭೆ ನಡೆಸಿದ್ದಾರೆ. ಆಯಾ ವಾರ್ಡಿನ ಸಮಸ್ಯೆಗಳ ಬಗ್ಗೆ ಆಯಾ ಭಾಗದ ಸದಸ್ಯರಿಗೆ ಅರಿವಿರುತ್ತದೆ. ಜಾತ್ರೆ ಯಶಸ್ವಿಗೆ ಇವರೆಲ್ಲರ ಸಹಕಾರ ಅಗತ್ಯವಿದೆ. ಹೀಗಿದ್ದರೂ ಶಾಸಕರು ಹಾಗೂ ತಾಪಂ ಇಒ ಅವರು ಪಂಚಾಯಿತಿಯ ಪ್ರಮುಖ ವ್ಯಕ್ತಿಗಳಿಗೆ ಸಭೆಯ ಬಗ್ಗೆ ತಿಳಿಸದೇ ಅವರನ್ನು ನಿರ್ಲಕ್ಷ್ಯ ಮಾಡಿ ಸಭೆ ನಡೆಸಿರುವುದು ಸರಿಯಲ್ಲ ಎಂದು ಟೀಕಿಸಿದರು.

ಯಾರೇ ಆಗಲಿ ಜಾತ್ರಾ ವಿಷಯದಲ್ಲಿ ರಾಜಕಾರಣ ಮಾಡಬಾರದು. ಶಾಸಕರಾದವರು ಜಾತ್ರೆಗೆ ಸಲಹೆ ಸೂಚನೆಯನ್ನು ಮಾತ್ರ ನೀಡಬೇಕು. ಅದನ್ನು ಹೊರತುಪಡಿಸಿ ರಾಜಕಾರಣಕ್ಕಾಗಿ ಜಾತ್ರಾ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು. ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಇದೇ ರೀತಿಯ ಗೊಂದಲ ಸೃಷ್ಟಿ ಮಾಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಂತರ ಗೊಂದಲ ಸರಿ ಮಾಡಲಾಯಿತು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಹರತಾಳು ಹಾಲಪ್ಪ ಅವರು ಜಾತ್ರಾ ವಿಷಯದಲ್ಲಿ ರಾಜಕಾರಣ ಮಾಡಿರಲಿಲ್ಲ. ಈಗಿನ ಶಾಸಕರು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಅಧಿಕಾರಿಗಳು ಶಾಸಕರ ಕೈ ಗೊಂಬೆಯಾಗಿದ್ದಾರೆ. ಅವರು ಹೇಳಿದ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮೇಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಶಾಸಕರು ರೈತರ ಪರ ಧ್ವನಿ ಎತ್ತಲಿ: ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲಿಯೂ ಅರಣ್ಯ ಇಲಾಖೆಯ ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ಗೋಮಾಳ, ರೆವಿನ್ಯೂ ಸೇರಿದಂತೆ ಇನ್ನಿತರ ಭೂಮಿಯನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳುತ್ತಿದ್ದಾರೆ. ಶಾಸಕರಾದವರು ರೈತರ ಪರವಾಗಿ ಮಾತನಾಡಬೇಕು. ಅರಣ್ಯ ಇಲಾಖೆಯವರು ಅವರ ಕೆಲಸವನ್ನು ಅವರು ಮಾಡಲಿ ಎಂದು ಅರಣ್ಯ ಇಲಾಖೆಯ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಒ ಅವರೊಬ್ಬರಿಂದಲೇ ಜಾತ್ರೆ ಮಾಡಲು ಸಾಧ್ಯವೇ?: ಮೋಹನ್ ಕುಮಾರ್

ಮಾರಿಕಾಂಬ ಜಾತ್ರಾ ವಿಷಯವಾಗಿ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿಯುವ ಮೊದಲೇ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಿರುವಾಗ ಜಾತ್ರಾ ವಿಷಯವಾಗಿ ಮತ್ತೆ ಸಭೆ ಮಾಡಿದಾಗ ಮಾಜಿ ಅಧ್ಯಕ್ಷರು, ಸದಸ್ಯರನ್ನು ಸಭೆಗೆ ಆಹ್ವಾನಿಸದೇ ಇಒ ಅವರು ನಿರ್ಲಕ್ಷ ಮಾಡಿದ್ದಾರೆ. ಇಒ ಅವರೊಬ್ಬರಿಂದಲೇ ಜಾತ್ರೆ ಮಾಡಲು ಸಾಧ್ಯವೇ? ಜಾತ್ರೆ ಮಾಡಲು ಜಾತ್ರೆ ಸಮಿತಿ ಸದೃಢವಾಗಿದೆ. ಅನುಭವ ಇಲ್ಲದ ಇಒ ಅವರ ಅವಶ್ಯಕತೆ ಇಲ್ಲ ಎಂದು ಆನಂದಪುರ ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಕಿಡಿಕಾರಿದರು.