ಪ್ರಿಯಕರನಿಂದ ಮಹಿಳೆಯ ಮೇಲೆ ದೌರ್ಜನ್ಯ

| Published : Oct 08 2025, 01:01 AM IST

ಪ್ರಿಯಕರನಿಂದ ಮಹಿಳೆಯ ಮೇಲೆ ದೌರ್ಜನ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಣ್ಣಿಗೇರಿಯ ನಾವಳ್ಳಿಯ ಮಹಿಳೆಯೊಂದಿಗೆ ಮದುವೆಗೂ ಮುಂಚೆ ಶಿರಹಟ್ಟಿಯ ಸುರೇಶ ಶಾರಪ್ಪ ಗುಡೆನ್ನವರ (32) ಅನೈತಿಕ ಸಂಬಂಧ ಇಟ್ಟುಕೊಂಡಿದ್ದ, ಮದುವೆ ನಂತರವೂ ಆ ಸಂಬಂಧವನ್ನು ಮುಂದುವರಿಸಲು ಸುರೇಶ ಒತ್ತಾಯಪಡಿಸುತ್ತಿದ್ದ ಎನ್ನಲಾಗಿದೆ.

ಅಣ್ಣಿಗೇರಿ:

ಅನೈತಿಕ ಸಂಬಂಧ ಮುಂದುವರಿಸಲು ನಿರಾಕರಿಸಿದ ಮಹಿಳೆ ಮೇಲೆ ಅವಳ ಪ್ರಿಯಕರ ಅತ್ಯಾಚಾರಕ್ಕೆ ಯತ್ನಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನಾವಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಣ್ಣಿಗೇರಿಯ ನಾವಳ್ಳಿಯ ಮಹಿಳೆಯೊಂದಿಗೆ ಮದುವೆಗೂ ಮುಂಚೆ ಶಿರಹಟ್ಟಿಯ ಸುರೇಶ ಶಾರಪ್ಪ ಗುಡೆನ್ನವರ (32) ಅನೈತಿಕ ಸಂಬಂಧ ಇಟ್ಟುಕೊಂಡಿದ್ದ, ಮದುವೆ ನಂತರವೂ ಆ ಸಂಬಂಧವನ್ನು ಮುಂದುವರಿಸಲು ಸುರೇಶ ಒತ್ತಾಯಪಡಿಸುತ್ತಿದ್ದ ಎನ್ನಲಾಗಿದೆ.

ಅ. 4ರಂದು ಮಹಿಳೆ ತನ್ನ ಪತಿ ಮಂಜುನಾಥನೊಂದಿಗೆ ಹೊಲಕ್ಕೆ ಹೋದಾಗ, ಆಕೆಯನ್ನು ಸಂದಿಸಲು ಸುರೇಶ ಹೊಲಕ್ಕೂ ಬಂದಿದ್ದಾನೆ. ಮಹಿಳೆಯ ಪತಿ ಬೇರೆಡೆ ಹೊಗುವುದನ್ನು ಕಾಯುತ್ತ ಪಕ್ಕದ ಗೋವಿನ ಜೋಳದ ಹೊಲದಲ್ಲಿ ಕುಳಿತು, ಆತ ಬೇರೆಡೆ ಹೋಗುತ್ತಿದ್ದಂತೆ ಮಹಿಳೆಯನ್ನು ಬಲವಂತವಾಗಿ ಗೋವಿನ ಜೋಳದ ಬೆಳೆಯಲ್ಲಿ ಎಳೆದು ತಂದಿದ್ದಾನೆ. ಆಕೆ ಆರೋಗ್ಯ ಸರಿ ಇಲ್ಲ, ಇನ್ನೊಂದು ದಿನ ಭೇಟಿ ಆಗೋಣ ಎಂದರೂ ಸುರೇಶ ಒತ್ತಾಯ ಮಾಡಿದ್ದಾನೆ. ಆಕೆ ಒಪ್ಪದೇ ಇದ್ದಾಗ ಆವೇಶದಲ್ಲಿ ಕುತ್ತಿಗೆ ಹಿಸುಕಿ ಅತ್ಯಾಚಾರಕ್ಕೆ ಮುಂದಾದಾಗ ಮಹಿಳೆಯು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ ಭಯದಿಂದ ಸುರೇಶ ಅಲ್ಲಿಂದ ಕಾಲ್ಕಿತ್ತಿದ್ದನಂತೆ.

ಪತಿ ಮಂಜುನಾಥ ವಾಪಸ್‌ ಹೊಲಕ್ಕೆ ಬಂದಾಗ ಪತ್ನಿ ಹೊಲದಲ್ಲಿ ಕಾಣದಾದಾಗ ಸುತ್ತೆಲ್ಲ ಹುಡುಕಾಡುತ್ತಾ ಹೋದಾಗ ಗೋವಿನ ಜೋಳದ ಬೆಳೆಯಲ್ಲಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ತಕ್ಷಣ ಸಂಬಂಧಿಕರಿಗೆ ವಿಷಯ ತಿಳಿಸಿ ಪತ್ನಿಯನ್ನು ಗದಗ ಖಾಸಗಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾನೆ. ನಾಲ್ಕು ದಿನವಾದರೂ ಆಕೆ ಇನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗಾಯಾಳು ಮಹಿಳೆಯ ಸಹೋದರ ಅಣ್ಣಿಗೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಡಿಎಸ್‌ಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಪಿಎಸೈ ಉಮಾದೇವಿ ಸಿ., ಮತ್ತು ತಂಡ ಆರೋಪಿಯನ್ನು ಮಂಗಳವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ಸುರೇಶ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.