ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶದಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಗಳ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ ಎಂದು ಆರೋಪಿಸಿ ತಾಲೂಕು ಎಬಿವಿಪಿ ಘಟಕ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶದಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಗಳ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ ಎಂದು ಆರೋಪಿಸಿ ತಾಲೂಕು ಎಬಿವಿಪಿ ಘಟಕ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.ತಾಲೂಕಿನ ಹಲವಾರು ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಪ್ರಯಾಣಿಸುತ್ತಿದ್ದಾರೆ. ಇವರಿಗೆ ಶಾಲಾ ಕಾಲೇಜಿನ ವೇಳೆಗೆ ತಲುಪಲು ಬಸ್ ಸೌಕರ್ಯ ಇಲ್ಲದಂತಾಗಿದೆ. ಕಲ್ಲೂರು ಕ್ರಾಸ್ ನಿಂದ ತುರುವೇಕೆರೆಗೆ ಬರಲು ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹಾಜರಾತಿಗೆ ತೊಂದರೆಯಾಗಿದೆ. ಪ್ರತಿದಿನ ಒಂದೆರೆಡು ಗಂಟೆಗಳ ಕಾಲ ತಡವಾಗಿ ಶಾಲಾ ಕಾಲೇಜುಗಳಿಗೆ ಹೋಗುವಂತಾಗಿದೆ. ಇದರಿಂದ ಪಾಠಪ್ರವಚನಕ್ಕೂ ತೊಂದರೆಯಾಗಿದೆ ಎಂದು ದೂರಿದ್ದಾರೆ. ಹಲವಾರು ಬಸ್ ಚಾಲಕರು ವಿದ್ಯಾರ್ಥಿಗಳನ್ನು ಕಂಡೊಡನೆ ಬಸ್ ನಿಲ್ಲಿಸದೇ ವೇಗವಾಗಿ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಾರೆ. ಹಲವಾರು ಬಸ್ ಗಳು ನಿಲ್ಲಿಸಿದರೂ ಸಹ ವಿದ್ಯಾರ್ಥಿ ಪಾಸ್ ನ್ನು ಅನುಮೋದಿಸುತ್ತಿಲ್ಲ. ತಿಪಟೂರು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಗಳ ಕೊರತೆ ಇದ್ದು ತುಂಬಾ ಸಮಸ್ಯೆಯಾಗಿದೆ. ಗುಡ್ಡೇನಹಳ್ಳಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಎರಡು ಬಾರಿ ಬಸ್ ನ್ನು ವ್ಯವಸ್ಥೆ ಮಾಡಬೇಕು ಎಂದು ಎಬಿವಿಪಿ ಮುಖಂಡರು ಆಗ್ರಹಿಸಿದರು. ಕೆಲ ಕಾಲ ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟಿಸಿದರು. ತಹಸೀಲ್ದಾರ್ ಎನ್. ಎ.ಕುಂಇ ಅಹಮದ್, ಕೆಎಸ್ ಆರ್ ಟಿಸಿ ಡಿಪೋ ಮ್ಯಾನೇಜರ್ ತಮ್ಮಯ್ಯ, ಎಸೈ ಮೂರ್ತಿ ಯವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಸಮಾಧಾನದಿಂದ ಆಲಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು. ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್, ಜಿಲ್ಲಾ ಸಂಚಾಲಕ ದರ್ಶನ್, ಮುಖಂಡರಾದ ನಿಖಿಲ್, ಭರತ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.