ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸಿದ್ಧೇಶ್ವರ ದೇವಾಲಯ ಆರವಣದ ಮುಂದೆ ಸೇರಿದ ನೂರಾರು ಪದಾಧಿಕಾರಿಗಳು ಪ್ರತಿಭಟನೆ ಮೆರವಣಿಗೆ ಆರಂಭಿಸಿ, ನಗರದ ಗಾಂಧಿ ವೃತ್ತದ ಮಾರ್ಗದಿಂದ ಬಸವೇಶ್ವರ ವೃತ್ತದ ರಸ್ತೆಯನ್ನು ಬಂದು ಮಾಡಿ ಸಮಸ್ಯೆಗಳನ್ನು ಬಗೆಹರಿಸುವಂತೆ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಧಿಕ್ಕಾರ ಕೂಗಿದರು.
ಇದೇ ಸಂದರ್ಭದಲ್ಲಿ ರಸ್ತೆ ತಡೆಗಟ್ಟಿದ ಕಾರಣ ಪೊಲೀಸ್ ಮತ್ತು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರ ನಡುವೆ ಮಾತಿನ ಚಕಮಕ್ಕಿ ನಡೆಯಿತು. ನಂತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ಪಟ್ಟು ಹಿಡಿದರು.ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಅನೇಕ ವಿಶ್ವವಿದ್ಯಾಲಯಗಳು ಅತ್ಯಂತ ವ್ಯವಸ್ಥಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡಿದೆ, ಆದರೆ ಇವತ್ತಿನ ವಿಶ್ವವಿದ್ಯಾಲಯಗಳಿಗೆ ಶಿಕ್ಷಣವು ಪ್ರಾಮುಖ್ಯತೆ ಆಗದೆ ಕೇವಲ ಆಡಳಿತ ಮಾಡುವ ಕೇಂದ್ರಗಳಾಗಿವೆ, ಸರ್ಕಾರಗಳು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಮಾತನಾಡಿ, ಸಮಯಕ್ಕೆ ಪರೀಕ್ಷೆಯ ಫಲಿತಾಂಶವನ್ನು ನೀಡುವುದಕ್ಕೆ ಆಗುತ್ತಿಲ್ಲ, ನೀಡಿರುವ ಪಲಿತಾಂಶದಲ್ಲಿ ಹಲವಾರು ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿವೆ, ಕೆಲವೊಂದು ಸೆಮಸ್ಟರ್ ಗಳ ಫಲಿತಾಂಶಗಳು ಬಂದು ವರ್ಷವಾದರೂ ಇಲ್ಲಿಯವರೆಗೆ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ದೊರಕದೆ ಇರುವುದು ದುರಾದೃಷ್ಟ ಸಂಗತಿ, ವಿಶ್ವವಿದ್ಯಾಲಯಗಳು ನೀಡುತ್ತಿರುವ ಫಲಿತಾಂಶದಲ್ಲಿ ಬಹಳಷ್ಟು ಗೊಂದಲಗಳು ಆಗುತ್ತಿವೆ. ಉತ್ತೀರ್ಣವಾದ ವಿದ್ಯಾರ್ಥಿ ಮತ್ತೆ ಫಲಿತಾಂಶವನ್ನು ನೋಡಿದಾಗ ಅನುತೀರ್ಣ ಎಂದು ತೋರಿಸಿದ ಉದಾಹರಣೆಗಳು ಇವೆ. ಪರೀಕ್ಷೆಗಳು ನಡೆದ ಎಷ್ಟೋ ತಿಂಗಳುಗಳಾದರೂ ಫಲಿತಾಂಶವನ್ನು ನೀಡುವುದಕ್ಕೆ ಆಗುತ್ತಿಲ್ಲ ವಿಶ್ವವಿದ್ಯಾಲಯದ ಸಹಾಯವಾಣಿಯು ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ದೂರಿದರು.ಬೋಧನಾ ವಿಷಯಗಳ ಕುರಿತು ವಿಶ್ವವಿದ್ಯಾಲಯಕ್ಕೆ ಸ್ಪಷ್ಟನೆ ಇಲ್ಲದೆ ತರಗತಿಗಳನ್ನ ಪ್ರಾರಂಭ ಮಾಡಿದ ಒಂದು ತಿಂಗಳ ನಂತರ ವಿಷಯಗಳನ್ನು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿ ಮಾಡುತ್ತಿದೆ. ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆಯಿಂದ ವಿದ್ಯಾರ್ಥಿಗಳ ಮೇಲೆ ಬೇರೆ ಮಾರ್ಗಗಳ ಮೂಲಕ ದಂಡ ವಸೂಲಿ ಮಾಡಿ ವಿಶ್ವವಿದ್ಯಾಲಯ ನಡೆಸುವ ಸ್ಥಿತಿಗೆ ತಲುಪಿದೆ. ಅಂಕಪಟ್ಟಿಯ ಶುಲ್ಕವನ್ನು ಕಟ್ಟಿಸಿಕೊಂಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿ ನೀಡದೆ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಮಾಡುತ್ತಿದೆ ಎಂದು ಆರೋಪಿಸಿದರು.
ಮರು ಮೌಲ್ಯಮಾಪನದ ಫಲಿತಾಂಶ ನೀಡದೆ ಮುಂದಿನ ಸೆಮೆಸ್ಟರ ಪರೀಕ್ಷೆಯ ಅರ್ಜಿಯನ್ನ ತುಂಬಲು ಕೊನೆಯ ದಿನಾಂಕವನ್ನು ನೀಡಿ ವಿದ್ಯಾರ್ಥಿಗಳಿಗೆ ಗೊಂದಲವನ್ನು ಆಗುತ್ತಿದೆ ಎಂದು ಆಗ್ರಹಿಸಿದರು, ಸಮಸ್ಯೆಗಳಿಗೆ ಮೌಲ್ಯಮಾಪನ ಕುಲಸಚಿವರು ಉತ್ತರ ನೀಡಿದರು, ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮನವಿ ಪತ್ರವನ್ನು ತೆಗೆದುಕೊಂಡರು. ಸಮಸ್ಯೆ ಬಗೆ ಹರಿಸದೆ ಹೋದರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ಹರ್ಷ ನಾಯಕ, ರೇಖಾ ಮಾಳಿ, ಕವಿತಾ ಬಿರಾದಾರ, ಸಿದ್ದು ಪತ್ತಾರ, ಶಿವನಗೌಡ ಬಿರಾದಾರ, ಮಲ್ಲಿಕಾರ್ಜುನ ಮಾಳಿ, ಮಾಂತೇಶ ಕಂಬಾರ, ಶ್ರೀಕಾಂತ ರೆಡ್ಡಿ, ಪ್ರವೀಣ ಬಿರಾದಾರ, ಅಭಿಷೇಕ ಬಿರಾದಾರ, ಅಭಿಷೇಕ ಗುಡದಿನ್ನಿ, ಸಂದೀಪ ಅರಳಗುಂಡಗಿ, ಐಶ್ವರ್ಯ ಆಸಂಗಿ, ವಿನಾಯಕ , ಪೂಜಾ ವೀರಶೆಟ್ಟಿ, ಶ್ರವಣ್ ಕುಮಾರ್,ಅಮಿತ ದರ್ಶನ ಪ್ರದೀಪ, ವಿಜಯಲಕ್ಷ್ಮಿ, ಶಿಲ್ಪಾ ಪೂಜಾರಿ ಮುಂತಾದವರು ಇದ್ದರು.