ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆವ ನಿರ್ಧಾರಕ್ಕೆ ಎಬಿವಿಪಿ ಆಕ್ರೋಶ

| Published : May 14 2024, 01:04 AM IST

ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆವ ನಿರ್ಧಾರಕ್ಕೆ ಎಬಿವಿಪಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ಭಾರತೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು, ಮುಂದಿನ ಹತ್ತಾರು ವರ್ಷಗಳ ನಂತರ ದೇಶದಲ್ಲಿ ಕೌಶಲ್ಯಯುತ ಯುವಶಕ್ತಿ ಹೊರಗಡೆ ಬರಬೇಕು, ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ `ರಾಷ್ಟ್ರೀಯ ಶಿಕ್ಷಣ ನೀತಿ-2020 ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂಪಡೆಯುತ್ತೇವೆ ಎಂದು ಹೇಳಿತ್ತು. ಆ ಕಾರಣಕ್ಕೋಸ್ಕರ ಒಂದು ಶಿಕ್ಷಣ ನೀತಿಯನ್ನ ಬದಲಾವಣೆ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ್ಯವನ್ನು ನೀಡುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿತ್ತು. ಮುಂದಿನ 20 ರಿಂದ 25 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ನೀತಿಯನ್ನು ಹಲವಾರು ಶಿಕ್ಷಣ ತಜ್ಞರು ತಯಾರು ಮಾಡಿದ್ದಾರೆ, ಆದರೆ ರಾಜ್ಯ ಸರ್ಕಾರ ರಾಷ್ಟ್ರೀಯತೆಯ ತುಂಡು ಮಾಡಿ ಪ್ರತ್ಯೇಕತೆಯ ಹೆಜ್ಜೆ ಇಡುತ್ತಿರುವುದು ಕರ್ನಾಟಕವನ್ನು ಹಿಮ್ಮುಖ ಚಲನೆಗೆ ತೆಗೆದುಕೊಂಡು ಹೋದಂತಾಗುತ್ತದೆ ಎಂದರು.

ಭಾರತೀಯತೆಯ ,ಇಲ್ಲಿನ ಜೀವನ ಪದ್ಧತಿಯ ವಿರೋಧಿಸುವ , ಇಂಗ್ಲಿಷ್ ಶಿಕ್ಷಣ ಪದ್ಧತಿಯ ನಿಲುವನ್ನ ಒಪ್ಪಿಕೊಳ್ಳುವ, ಯುಜಿಸಿ ನಿಯಮಾವಳಿಗಳನ್ನು ಕಡೆಗಣಿಸುವ ನೀತಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವುದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತಿದೆ, ಯುಪಿಎಸ್ ಸಿ ಹಾಗು ಇನ್ನಿತರ ಸ್ಪರ್ಧಾತ್ಮಕ ಕೋರ್ಸ್‍ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡುವುದರಿಂದ ಅನ್ಯಾಯ ಮಾಡಿದಂತಾಗುತ್ತದೆ.

ಕೇವಲ ರಾಜಕೀಯ ಕಾರಣಕ್ಕೋಸ್ಕರ ಒಂದು ಉತ್ತಮ ಪ್ರಯೋಗಶೀಲ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿರುವ ಸರ್ಕಾರದ ನಡೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಎನ್‍ಇಪಿ ಜಾರಿ ಮಾಡಿದ ಕಾರಣಕ್ಕೋಸ್ಕರ ನೂರಾರು ಕೋಟಿ ರೂಪಾಯಿ ಅನುದಾನವನ್ನು ಪಿಎಂ ಉಷಾ ಯೋಜನೆಯಡಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ನೀಡಿದೆ, ಒಂದು ವೇಳೆ ಎನ್.ಇಪಿಯನ್ನು ರದ್ದು ಪಡಿಸಿದ್ದೆ ಆದಲ್ಲಿ ವಿಶ್ವವಿದ್ಯಾಲಯದ ನೀಡಿದ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಎನ್.ಇಪಿಯಲ್ಲಿ ಆಗಿರುವ ಲೋಪದೋಷಗಳ ಸರಿಮಾಡಿ ಮುಂದುವರಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕನಕರಾಜ್ ಕೋಡಿಹಳ್ಳಿ, ನಗರ ಕಾರ್ಯದರ್ಶಿ ಗೋಪಿ, ವಿದ್ಯಾರ್ಥಿ ಪ್ರಮುಖ್ ಚಂದನ, ಚಿತ್ರಸ್ವಾಮಿ, ದರ್ಶನ್, ಮಧು, ಮನೋಜ್, ಯುವರಾಜ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.