ಬೈಲಹೊಂಗದಲ್ಲಿ ರಸ್ತೆ ತಡೆದು ಎಬಿವಿಪಿ ಪ್ರತಿಭಟನೆ

| Published : Apr 21 2024, 02:22 AM IST

ಸಾರಾಂಶ

ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ, ಆರೋಪಿ ಫಯಾಜ್‌ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ, ಆರೋಪಿ ಫಯಾಜ್‌ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿ ಬ್ರಹತ್‌ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಇಂಚಲ ಕ್ರಾಸ್‌ದಿಂದ ಪ್ರತಿಭಟನೆ ಮೆರವಣಿಗೆ ಹೊರಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಎಬಿವಿಪಿ ಕಾರ್ಯಕರ್ತರು ಸೇರಿ ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ಪ್ರತಿಭಟನೆ ವೇಳೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಿಂದು ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.

ಎಬಿವಿಪಿ ಪದಾಧಿಕಾರಿಗಳಾದ ಗಿರೀಶ ಹರಕುಣಿ, ಅಪ್ಪಣ್ಣ ಹಡಪದ, ಭರತ ಹುಲಮನಿ, ಗಜಾನನ ಮದಲಬಾಂವಿ, ಆಕಾಶ ಪೂಜೇರ, ಮುತ್ತುರಾಜ ಚಿನ್ನನ್ನವರ, ಸುಶ್ಮಾ ಮೂಗಿ, ವಿಎಚ್‌ಪಿ ಮುಖಂಡ ವಿವೇಕಾನಂದ ಪೂಜೇರ ಹಾಗೂ ಕಾರ್ಯಕರ್ತರು ಇದ್ದರು.