9 ಹೊಸ ವಿಶ್ವವಿದ್ಯಾಲಯ ಮುಚ್ಚದಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

| Published : Feb 18 2025, 12:31 AM IST

ಸಾರಾಂಶ

ವಿಶ್ವವಿದ್ಯಾಲಯಗಳ ಕುರಿತು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಬೇಕೆ ಹೊರತು ರಾಜಕೀಯ ಕೇಂದ್ರಿತ ನಿರ್ಧಾರಗಳು ಆಗಬಾರದು ಎಂದು ಹೋರಾಟಗಾರರು ತಿಳಿಸಿದರು.

ಹಾವೇರಿ: ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ರಾಜ್ಯದಲ್ಲಿ ಸ್ಥಾಪನೆಯಾಗಿರುವ ೯ ಹೊಸ ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿರುವ ನಿಲುವು ಖಂಡಿಸಿ ನಗರದ ಹೊರವಲಯದಲ್ಲಿರುವ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಎದುರು ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ವಿವಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರಗಳು. ಅಲ್ಲಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ. ಅಂತಹ ವಿವಿಗಳಿಗೆ ಮೂಲ ಸೌಲಭ್ಯಗಳನ್ನು ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಹೊಸ ವಿಶ್ವವಿದ್ಯಾಲಯಗಳನ್ನು ಇಂದಿನ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದನ್ನು ಖಂಡನೀಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಎಬಿವಿಪಿಯ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ರಾಜ್ಯದ ೯ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ. ಡಿಸಿಎಂ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದ ಉಪಸಮಿತಿಯು ಆರ್ಥಿಕ ಹಾಗೂ ಮೂಲ ಸೌಲಭ್ಯಗಳ ನೆಪ ಹೇಳಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದರು.

ಸರ್ಕಾರಗಳು ವಿಶ್ವವಿದ್ಯಾಲಯಗಳ ಸ್ಥಾಪನೆ ಹಾಗೂ ಮುಚ್ಚುವ ಮನಸೋ ಇಚ್ಛೆ ಕಾರ್ಯದಿಂದ ವಿಶ್ವವಿದ್ಯಾಲಯಗಳ ಮೇಲೆ ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ಇರುವ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ವಿಶ್ವವಿದ್ಯಾಲಯಗಳ ಕುರಿತು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಬೇಕೆ ಹೊರತು ರಾಜಕೀಯ ಕೇಂದ್ರಿತ ನಿರ್ಧಾರಗಳು ಆಗಬಾರದು ಎಂದರು.ಸಾಮಾನ್ಯವಾಗಿ ೧೦,೦೦೦ ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯಗಳು ಇರಬೇಕೆಂಬುವುದು ಆದರ್ಶವಾದ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸುಮಾರು ೨೦೦ ಕಿಮೀ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕು. ಇಂತಹ ಸಮಸ್ಯೆ ಪರಿಹಾರಕ್ಕೆ ಹೊಸ ವಿವಿಗಳು ಸಹಕಾರಿಯಾಗಬೇಕು. ಯಾವುದೇ ಸರ್ಕಾರಗಳು ಘೋಷಣೆ ಮಾಡಿದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಬೇಕೆ ಹೊರತು ಆತಂತ್ರಗೊಳಿಸಬಾರದು ಎಂದು ಕಿಡಿಕಾರಿದರು.ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜ್ಯ ಸರ್ಕಾರ ಎರಡು ವರ್ಷ ಕಳೆದರೂ ಸಹಿತ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಕಿಂಚಿತ್ತೂ ಗಮನಕೊಡದೆ ಈಗ ಮೂಲ ಸೌಲಭ್ಯಗಳ ನೆಪವೊಡ್ಡಿ ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೂಡಲೇ ಈ ಧೋರಣೆ ಕೈಬಿಟ್ಟು ಹೊಸ ವಿಶ್ವವಿದ್ಯಾಲಯಗಳ ಮೂಲ ಸೌಲಭ್ಯಕ್ಕೆ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕಾಗಿ ಅನುದಾನ ನೀಡುವಂತೆ ಆಗ್ರಹಿಸಿದರು.ಈ ಸಂದರ್ಬದಲ್ಲಿ ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಡಾಂಗೆ, ಧಾರವಾಡ ವಿಭಾಗ ಸಂಘಟನ ಕಾರ್ಯದರ್ಶಿ ಮಣಿಕಂಠ ಕಳಸ, ಹಾವೇರಿ ತಾಲೂಕು ನವೀನ ಜಿ.ಕೆ., ಅಪರ್ಣ, ಕಾವ್ಯ, ಅರ್ಜುನ್, ಕಾರ್ತಿಕ, ರಾಕೇಶ್, ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.