ನೀಟ್‌ ಪರೀಕ್ಷೆ ಲೋಪ: ತನಿಖೆಗೆ ಒತ್ತಾಯಿಸಿ ಹಾಸನದಲ್ಲಿ ಎಬಿವಿಪಿ ಪ್ರತಿಭಟನೆ

| Published : Jun 11 2024, 01:35 AM IST

ನೀಟ್‌ ಪರೀಕ್ಷೆ ಲೋಪ: ತನಿಖೆಗೆ ಒತ್ತಾಯಿಸಿ ಹಾಸನದಲ್ಲಿ ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್, ಯುಜಿ ಪರೀಕ್ಷೆ ಮತ್ತು ಫಲಿತಾಂಶದಲ್ಲಿನ ಲೋಪವನ್ನು ಸರಿಪಡಿಸಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಸನದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟಿಸಿ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎನ್‌ಟಿಎ ಭ್ರಷ್ಟಾಚಾರ ಬಹಿರಂಗಪಡಿಸಲು ಸಿಬಿಐ ತನಿಖೆಗೆ ಆಗ್ರಹ । ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಹಾಸನ

ನೀಟ್, ಯುಜಿ ಪರೀಕ್ಷೆ ಮತ್ತು ಫಲಿತಾಂಶದಲ್ಲಿನ ಲೋಪವನ್ನು ಸರಿಪಡಿಸಿ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಎನ್‌ಟಿಎ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟಿಸಿ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಬಿವಿಪಿ ವಿಭಾಗದ ಸಂಚಾಲಕ ಜಿ.ಗಿರೀಶ್ ಮಾಧ್ಯಮದೊಂದಿಗೆ ಮಾತನಾಡಿ, ‘ಪಿಯುಸಿ ನಂತರ ವೈದ್ಯಕೀಯ ಶಿಕ್ಷಣ ಪಡೆಯಲು ದೇಶದಾದ್ಯಂತ ಕಡ್ಡಾಯವಾಗಿ ನೀಟ್, ಅಥವಾ ನ್ಯಾಷನಲ್ ಎಲಿಜಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್ ಜಾರಿಯಲ್ಲಿದೆ. ಈ ಪರೀಕ್ಷೆಯಲ್ಲಿ ಹಲವು ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ೬೭ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ೭೨೦ಕ್ಕೆ ೭೨೦ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾರೆ. ಆದರೆ ಕಳೆದ ಬಾರಿ ಪರೀಕ್ಷೆ ನಡೆದಾಗ ಈ ಪರೀಕ್ಷೆಯಲ್ಲಿ ಕೇವಲ ಒಬ್ಬರು ಮಾತ್ರ ಪ್ರಥಮ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ೬೭ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುವುದು ಸಂಶಯಕ್ಕೆ ಕಾರಣವಾಗಿದೆ’ ಎಂದು ದೂರಿದರು.

‘ಹರಿಯಾಣದ ಒಂದೇ ಕೊಠಡಿಯಲ್ಲಿದ್ದ ಆರು ವಿದ್ಯಾರ್ಥಿಗಳು ೭೨೦ಕ್ಕೆ ೭೨೦ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿರುವುದು ಎಲ್ಲರ ಸಂಶಯಕ್ಕೂ ಕಾರಣವಾಗಿದೆ. ಈ ಪರೀಕ್ಷೆಯಲ್ಲಿ ೨೪ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೫೭೧ ಕೇಂದ್ರಗಳಲ್ಲಿ ಮತ್ತು ೧೪ ವಿದೇಶಿ ಕೇಂದ್ರಗಳಲ್ಲಿ ಸಹ ಪರೀಕ್ಷೆ ನಡೆದಿದೆ. ಅಲ್ಲದೆ ನೀಟ್ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ನಾಲ್ಕು ಅಂಕಗಳು ಇರುತ್ತವೆ. ಒಂದು ಪ್ರಶ್ನೆ ತಪ್ಪು ಆದರೆ ಅದಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಅಂದರೆ ನೆಗೆಟಿವ್ ಅಂಕ ಇರುತ್ತದೆ. ೧೮೦ ಪ್ರಶ್ನೆಗಳಲ್ಲಿ ೧೭೯ ಉತ್ತರ ನೀಡಿದ್ದು, ಒಂದು ಉತ್ತರ ತಪ್ಪಾಗಿದ್ದರೂ ೭೧೫ ಅಂಕ ಬರಬೇಕು. ಆದರೆ ಬಹಳಷ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 720ಕ್ಕೆ ೭೧೮, ೭೧೯ ಅಂಕ ಬಂದಿದೆ. ಈ ರೀತಿ ಬರಲಿಕ್ಕೆ ಸಾಧ್ಯವೇ ಇಲ್ಲ. ಇದು ಅವೈಜ್ಞಾನಿಕವಾಗಿದೆ. ಮೇ ೫ ರಂದು ಪರೀಕ್ಷೆ ನಡೆದ ದಿನ ಹರಿಯಾಣದ ಕೆಲವು ಕಡೆ ಪರೀಕ್ಷೆಯಲ್ಲಿ ಅಕ್ರಮ ಆಗಿರುವುದು ಮತ್ತು ಪ್ರಶ್ನೆ ಪತ್ರಿಕೆ ನೀಡುವುದರಲ್ಲಿ ತಪ್ಪಾಗಿರುವುದು ಸಾಬೀತಾಗಿದೆ’ ಎಂದು ಹೇಳಿದರು.

‘ಬಿಹಾರದ ಕೆಲವು ಕಡೆ ಅಕ್ರಮಗಳು ಸಾಬೀತಾಗಿ ಅಪರಾಧಿಗಳನ್ನು ಬಂಧಿಸಲಾಗಿದೆ, ಈ ರೀತಿ ಮೇಲ್ನೋಟಕ್ಕೂ ಸಹ ಎನ್‌ಟಿಎ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಮತ್ತು ಪರೀಕ್ಷೆಗೆ ಪೂರ್ವಭಾವಿ ತಯಾರಿ ಇಲ್ಲದಿರುವುದು ಸಹ ಕಂಡು ಬರುತ್ತದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ನಷ್ಟವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ನೇಣಿಗೆ ಶರಣಾಗುತ್ತಿರುವುದು ಸಹ ತುಂಬಾ ಶೋಚನೀಯವಾಗಿದೆ. ಆದ್ದರಿಂದ ನೊಂದ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಸೂಕ್ತ ನ್ಯಾಯ ಕೊಡಿಸಿ ತಪ್ಪಿತಸ್ಥರನ್ನು ಬಂಧಿಸಿ ಈ ವಿಷಯದ ಕುರಿತು ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಶ್ರೀನಿವಾಸ್ ಸಾವರ್ಕರ್, ಚಿರಂತ್, ಸುಶ್ಮಿತಾ, ಗಿರೀಶ್, ಮಮತ್, ನಿಖಿಲ್ ಇತರರು ಇದ್ದರು.