ಪೇಮೆಂಟ್ ಸೀಟುಗಳ ಹಂಚಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

| Published : Sep 29 2024, 01:36 AM IST

ಸಾರಾಂಶ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶೇ. 50ರಷ್ಟು ಮ್ಯಾನೇಜಮೆಂಟ್ ಕೋಟಾ ಮಾದರಿಯ ಪೇಮೆಂಟ್ ಸೀಟು ಹಂಚಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶೇ. 50ರಷ್ಟು ಮ್ಯಾನೇಜಮೆಂಟ್ ಕೋಟಾ ಮಾದರಿಯ ಪೇಮೆಂಟ್ ಸೀಟು ಹಂಚಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಯುಬಿಡಿಟಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಪಾಲ್ಗೊಂಡಿದ್ದ ಸಂಘಟನೆ ಮುಖಂಡರು, ವಿದ್ಯಾರ್ಥಿಗಳು ಬೆಳಗಾವಿ ವಿಟಿಯು ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಭಾರ ಪ್ರಾಚಾರ್ಯರ ಮುಖಾಂತರ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.ಕರ್ನಾಟಕದ ಮೊದಲ ಹಾಗೂ ಪ್ರತಿಷ್ಠಿತ ಸರ್ಕಾರಿ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿಗೆ ಸರ್ಕಾರ ವಿಶೇಷ ಆದ್ಯತೆ ವಹಿಸಿ ಕಾಯಕಲ್ಪ ನೀಡಬೇಕಿತ್ತು. ಆದರೆ ಬಡ ವಿದ್ಯಾರ್ಥಿಗಳ ಆಶಾಕಿರಣ ನಂದಿಸುವ ಕೆಲಸ ಈಗಿನ ರಾಜ್ಯ ಸರ್ಕಾರದಿಂದ ಆಗುತ್ತಿದೆ. ಹೊಸ ಸರ್ಕಾರ ರಚನೆಯಾದ ಒಂದೂವರೆ ವರ್ಷಗಳಿಂದಲೂ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದರ ಭಾಗವಾಗಿಯೇ ಯುಬಿಡಿಟಿ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸೀಟುಗಳನ್ನು ಪೇಮೆಂಟ್ ಸೀಟುಗಳಾಗಿ ಮಾರ್ಪಡಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ರೋಹ ಎಸಗುತ್ತಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.ಇಂಜಿನಿಯರಿಂಗ್ ಸೀಟ್ ಗಳಿಗೆ ₹43,000 ಇದ್ದ ಶುಲ್ಕವನ್ನು ದಿಢೀರನೆ ₹97,000 ಗಳಿಗೆ ಏರಿಸಿ, ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ನಡೆಯುತ್ತಿದೆ. ವಿದ್ಯಾರ್ಥಿವೇತನ ವಿತರಣೆಯಲ್ಲೂ ಸಾಕಷ್ಟು ಅನ್ಯಾಯವಾಗುತ್ತಿದ್ದು, ಈ ಹಿಂದೆ ಇಂಜಿನಿಯರಿಂಗ್ ಓದುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಗುತ್ತಿದ್ದ ₹50,000 ವರೆಗಿನ ಸ್ಕಾಲರ್ ಶಿಪ್ ಮೊತ್ತವನ್ನು ಈಗಿನ ಸರ್ಕಾರ ₹10,000 ಕ್ಕೆ ಇಳಿಸಿದೆ ಎಂದು ಅವರು ಆರೋಪಿಸಿದರು.ಈಗಾಗಲೇ ಸರ್ಕಾರ ಯಾವುದೇ ದೂರದೃಷ್ಟಿ, ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಬೊಕ್ಕಸವನ್ನು ಬರಿದುಗೊಳಿಸಿದೆ. ಇನ್ನಾದರೂ ಸರ್ಕಾರ ದಾವಣಗೆರೆಯ ಯುಬಿಡಿಟಿ ಕಾಲೇಜು ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಖಾಸಗಿ ಕಾಲೇಜುಗಳನ್ನು ಮೀರಿಸುವಂತಹ ಶೈಕ್ಷಣಿಕ ವಾತಾವರಣ ನಿರ್ಮಿಸುವ ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಯುಬಿಡಿಟಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೆಚ್ಚಿಸಿರುವ ಶುಲ್ಕವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಅವಕಾಶವಂಚಿತ ವಿದ್ಯಾರ್ಥಿ ಸಮುದಾಯದ ಹಿತ ಕಾಪಾಡಲು ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಈ ಸಂದರ್ಭದಲ್ಲಿ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಎಚ್.ಕೆ. ಪ್ರವೀಣ್, ಮುಖಂಡರಾದ ವಿಜಯ ಕುಮಾರ, ತನೋಜ್ ಕುಮಾರ, ತನುಷಾ, ವರುಣ್, ನವೀನ್ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.