ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕೆಇಎ ನಡೆಸುವ ಕೆ-ಸೆಟ್ ಪರೀಕ್ಷಾ ಕೇಂದ್ರಗಳನ್ನು ಕಲಬುರಗಿಯಿಂದ ರದ್ದು ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.ನಗರದ ಎನ್‌ವಿ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಸರ್ಕಾರ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವುದನ್ನು ಬಿಟ್ಟು ಪರೀಕ್ಷಾ ಕೇಂದ್ರವನ್ನೇ ಬದಲಾವಣೆ ಮಾಡಿರುವುದು ಇದೊಂದು ಅಸಮರ್ಥ ರಾಜ್ಯ ಸರ್ಕಾರ ಅಸಮರ್ಥ ಮುಖ್ಯಮಂತ್ರಿ ಅಸಮರ್ಥ ಉಸ್ತುವಾರಿ ಸಚಿವ ಎಂದು ಹೇಳಿದರು. ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಐಷಾರಾಮಿ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಾರೆ ಆದರೆ ವಿದ್ಯಾರ್ಥಿಗಳ ಗತಿ ಏನು ಎಂದು ಪ್ರಶ್ನೆ ಮಾಡಿದರು.ರಾಜ್ಯ ಸಂಘಟನಾ ಕಾರ್ಯರ್ದರ್ಶಿ ಪೃಥ್ವಿಕುಮಾರ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿರುವ ಸರ್ಕಾರದ ನಡೆ ಖಂಡನೀಯ ಎಂದರು, ಸಾವಿರಾರು ಸ್ನಾತಕೋತ್ತರ ಪದವೀಧರರು ಸಹಾಯಕ ಪ್ರಾಧ್ಯಾಪಕರ ರಾಜ್ಯ ಅರ್ಹತಾ ಪರೀಕ್ಷೆಗಾಗಿ ಕಾದು ಕಾದು 3 ವರ್ಷಗಳ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದಾಗ ಆಕಾಂಕ್ಷಿಗಳು ಸಹಜವಾಗಿ ಸಂತೋಷ ಪಟ್ಟಿದ್ದರು.
ಈ ಹಿಂದೆ ಅರ್ಹತಾ ಪರೀಕ್ಷೆಗಳಿಗೆ ಪ್ರತೀ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದ ಕಾರಣ ಸಾವಿರಾರು ಆಕಾಂಕ್ಷಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುತ್ತಿತ್ತು. ಈ ಬಾರಿ ಪರೀಕ್ಷೆಯ ಅಧಿಸೂಚನೆ ಪ್ರಕಟಿಸಿದಾಗಲೇ ಕೆಇಎ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿತ ಮಾಡಿತ್ತು . 18 ಪರೀಕ್ಷಾ ವಿಷಯಗಳಿಗೆ ರಾಜ್ಯದಲ್ಲಿ ಕೇವಲ 8 ಕೇಂದ್ರಗಳನ್ನು ಹಾಗೂ ಉಳಿದ 20 ವಿಷಯಗಳಿಗೆ ಕೇವಲ ಬೆಂಗಳೂರನ್ನು ಮಾತ್ರ ಪರೀಕ್ಷೆಯ ಕೇಂದ್ರವಾಗಿಸಿತ್ತು. ಈ ರೀತಿಯ ಅವೈಜ್ಞಾನಿಕ ನಿರ್ಧಾರ ಕಲ್ಯಾಣ ಕರ್ನಾಟಕ ಭಾಗದ ಆಕಾಂಕ್ಷಿಗಳಿಗೆ ಅನ್ಯಾಯಮಾಡಿರುವುದನ್ನು ಎಬಿವಿಪಿ ಖಂಡಿಸಿತು.ರಾಷ್ಟೀಯ ಕಾರ್ಯಕಾರಣಿ ಸದಸ್ಯ ಭಾಗ್ಯಶ್ರೀ ಮಾತನಾಡಿ, ಎರಡು ದಿನಗಳ ಹಿಂದೆ ಕೆಇಎ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. 18 ವಿಷಯಗಳಿಗೆ ಈ ಮೊದಲು ನಿಗದಿ ಪಡಿಸಿದ್ದ ಕೇಂದ್ರಗಳಲ್ಲಿ ಕಲಬುರಗಿ ಮತ್ತು ವಿಜಯಪುರ ಜಿಲ್ಲಾ ಕೇಂದ್ರಗಳೂ ಒಳಗೊಂಡಿತ್ತು. ಈಗ ದಿಡೀರಾಗಿ ಈ ಕೇಂದ್ರಗಳನ್ನು ರದ್ದು ಮಾಡಿ ಕಲಬುರಗಿಯ ಕೇಂದ್ರವನ್ನು ಬೆಂಗಳೂರಿಗೆ ಮತ್ತು ವಿಜಯಪುರ ಕೇಂದ್ರವನ್ನು ತುಮಕೂರಿಗೆ ಬದಲಾಯಿಸಿದೆ.
ಸಾವಿರಾರು ಅಭ್ಯರ್ಥಿಗಳು ಈಗಾಗಲೇ ಈ ಜಿಲ್ಲಾ ಕೇಂದ್ರಗಳನ್ನೇ ಪರೀಕ್ಷೆ ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಾವಿರ ರೂಪಾಯಿಗಿಂತ ಹೆಚ್ಚು ಪರೀಕ್ಷಾ ಶುಲ್ಕ ಕಟ್ಟಿದ್ದಾರೆ. ತಮ್ಮದೇ ಜಿಲ್ಲೆಯಲ್ಲಿ ಸಮೀಪ ಪರೀಕ್ಷೆ ಇದೆ ಎಂದು ಅನೇಕರು ಪರೀಕ್ಷೆ ಕಟ್ಟಿರುತ್ತಾರೆ. ಆದರೆ ಈಗ ಇದ್ದಕ್ಕಿದ್ದಂತೆ ಬೆಂಗಳೂರು ಗೆ ಹೋಗಬೇಕು. 3 ಗಂಟೆಯ ಪರೀಕ್ಷೆಗೆ ಕನಿಷ್ಠ ಎರಡು ದಿನ, 24 ಗಂಟೆಗಿಂತ ಹೆಚ್ಚು ಪ್ರಯಾಣ ಮಾಡಬೇಕು. ಇದು ಯಾವ ನ್ಯಾಯವೆಂದು ಪ್ರಶ್ನಿಸಿದರು.ಇದರ ಪರಿಣಾಮವಾಗಿ ಈ ಭಾಗದ ಆಕಾಂಕ್ಷಿಗಳು ಭವಿಷ್ಯದಲ್ಲಿ ಪ್ರತಿಯೊಂದು ಪರೀಕ್ಷೆಗೂ ಬೆಂಗಳೂರಿಗೆ ಹೋಗಬೇಕಾಗಬಹುದು . ಸರ್ಕಾರ ಈ ಭಾಗದ ಅಭ್ಯರ್ಥಿಗಳಿವೆ ಅನ್ಯಾಯವಾಗದಂತೆ ತಡೆಯಲು ಕಾರ್ಯ ಪ್ರವೃತ್ತವಾಗಿ ಮೊದಲಿನಂತೆ ಪರೀಕ್ಷೆ ನಡೆಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿತು. ಈ ಸಂದರ್ಭದಲ್ಲಿ ಎಬಿವಿಪಿಯ ಮುಖಂಡರಾದ ಗಂಗಾಧರ ಹಂಜಗಿ, ಪ್ರಮೋದ ನಾಗುರಕರ, ಶಾಂತಕುಮಾರ ಬಿರಾದಾರ, ಹಣಮಂತ ಬಗಲಿ, ಇತರರು ಇದ್ದರು.