9 ವಿವಿ ಮುಚ್ಚದಂತೆ ಎಬಿವಿಪಿ ಧರಣಿ: ವಿಧಾನಸೌಧ ಮುತ್ತಿಗೆ ವಿಫಲ

| Published : Mar 02 2025, 01:18 AM IST

ಸಾರಾಂಶ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವುದನ್ನು ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯರು ಶನಿವಾರ ವಿಧಾನಸೌಧ ಮುತ್ತಿಗೆ ವಿಫಲ ಯತ್ನ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವುದನ್ನು ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯರು ಶನಿವಾರ ವಿಧಾನಸೌಧ ಮುತ್ತಿಗೆ ವಿಫಲ ಯತ್ನ ನಡೆಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ನೆರವಾಗಲೆಂದು ಬಿಜೆಪಿ ಸರ್ಕಾರ 9 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತು. ಎಲ್ಲ ವಿಶ್ವವಿದ್ಯಾಲಯಗಳನ್ನೂ ಹಿಂದುಳಿದ ಜಿಲ್ಲೆಗಳಲ್ಲಿಯೇ ಸ್ಥಾಪಿಸಲಾಗಿದ್ದು, ಅದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವಂತಾಗಿತ್ತು. ಈ ವಿಶ್ವವಿದ್ಯಾಲಯಗಳನ್ನು ಆರ್ಥಿಕ ಹೊರೆಯ ನೆಪ ಹೇಳಿ ಮುಚ್ಚಲು ಸರ್ಕಾರ ಮುಂದಾಗಿದ್ದು, ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ 9 ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ರೂಪಿಸಬೇಕಿದೆ. ಎಲ್ಲ ವಿವಿಗಳಲ್ಲೂ ಡಿಜಿಟಲ್‌ ತಂತ್ರಜ್ಞಾನ ಹೆಚ್ಚಾಗಿ ಬಳಸಿ, ಕನಿಷ್ಠ ಆಡಳಿತ-ಗರಿಷ್ಠ ಶಿಕ್ಷಣ ನೀಡುವ ಶೈಕ್ಷಣಿಕ ಕೇಂದ್ರಗಳನ್ನಾಗಿ ಮಾಡಲು ಸರ್ಕಾರ ಮುಂದಾಗಬೇಕು. ಅದರ ಬದಲು ಆರ್ಥಿಕ ಹೊರೆಯ ನೆಪವೊಡ್ಡಿ, ಮೂಲಸೌಕರ್ಯ ಒದಗಿಸದೇ ವಿವಿಗಳ ಕುತ್ತಿಗೆ ಹಿಚುಕಲು ಮುಂದಾಗಿರುವುದು ಖಂಡನೀಯ. ವಿವಿಗಳನ್ನು ಮುಚ್ಚುವ ಬದಲು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿನ ಪ್ರತಿಭಟನೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಎಬಿವಿಪಿ ಸದಸ್ಯರು ಸರ್ಕಾರದಿಂದ ಕೂಡಲೆ ಉತ್ತರ ನೀಡಬೇಕು ಎಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳಲಿದರು. ಆದರೆ, ಪೊಲೀಸರು ಅವರನ್ನು ಮಧ್ಯದಲ್ಲಿಯೇ ತಡೆದು ವಶಕ್ಕೆ ಪಡೆದರು.