ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ದೊಡ್ಡಹಳ್ಳಿ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಹಾಗೂ ಚಿಕ್ಕಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಶನಿವಾರ ಮಧುಗಿರಿ ಉಪವಿಭಾಗಧಿಕಾರಿ ಶಿವಪ್ಪ ದಿಢೀರ್ ಭೇಟಿ ನೀಡಿ ವಸತಿ ಶಾಲೆಗಳ ಅವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪರಿಶೀಲನೆ ನಡೆಸಿದರು.
ವಸತಿ ಶಾಲೆಗಳ ಸ್ಥಿತಿಗತಿ ಹಾಗೂ ಮೆನು ಪ್ರಕಾರ ಊಟ ತಿಂಡಿ ಹಾಗೂ ಅಡುಗೆ ಕೋಣೆ ಮತ್ತು ಶೌಚಗೃಹಗಳ ಸ್ವಚ್ಛತೆ ಕುರಿತು ಅಲ್ಲಿನ ಸಿಬ್ಬಂದಿ ಮತ್ತು ಸೌಲಭ್ಯ ವಿತರಣೆ ಕುರಿತು ಶಾಲೆಯ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿದರು.ಮೊದಲಿಗೆ ತಾಲೂಕಿನ ದೊಡ್ಡಹಳ್ಳಿ ಬಿಸಿಎಂ ಎಸ್‌ಸಿ ಎಸ್‌ಟಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಉಪವಿಭಾಗಧಿಕಾರಿಗಳು ವಿದ್ಯಾರ್ಥಿಗಳ ಹಾಜರಾತಿ, ಶೈಕ್ಷಣಿಕ ಪ್ರಗತಿ ಸೇರಿದಂತೆ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ,ವಸತಿ ಶಾಲೆಯ ಮೈದಾನದ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ, ಮೆನುಪ್ರಕಾರ ಊಟ ತಿಂಡಿ ಹಾಗೂ ಪಠ್ಯಪುಸ್ತಕ ಸಮವಸ್ತ್ರ ವಿತರಣೆ ವಿದ್ಯಾರ್ಥಿಗಳಿಂದ ವಿವರ ಪಡೆದರು. ಸರ್ಕಾರದ ಸೌಲಭ್ಯ ವಿತರಣೆ, ಪಠ್ಯಪುಸ್ತಕ, ಅಡುಗೆ ಕೋಣೆ ಶುಚಿತ್ವ ಮತ್ತು ಶೌಚಗೃಹ ಶಾಲಾ ಆವರಣದ ನೈರ್ಮಲ್ಯ ಶುಚಿತ್ವ, ಪರಿಸರ ಸಂರಕ್ಷಣೆ ಕುರಿತು ಹೆಚ್ಚು ನಿಗಾವಹಿಸಿ ಕಾಪಾಡುವಂತೆ ಪ್ರಾಂಶುಪಾಲ ಕಸ್ತೂರಿ ಕುಮಾರ್‌ಗೆ ಸೂಚಿಸಿದ ಉಪವಿಭಾಗಧಿಕಾರಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವಸತಿ ಶಾಲೆಗೆ ವಿತರಣೆ ಆಗಿರುವ ಸರ್ಕಾರದ ಸೌಲಭ್ಯ ಸರಿಯಾದ ರೀತಿಯಲ್ಲಿ ವಿತರಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗೆ ಹೆಚ್ಚು ಒತ್ತು ನೀಡುವಂತೆ ಆದೇಶಿಸಿದರು.
ಇದೇ ಗ್ರಾಮದ ಅಟಲ್ ಬಿಹಾರಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಮತ್ತು ಮಕ್ಕಳ ಸಂಖ್ಯೆ ಹಾಗೂ ಶುಚಿತ್ವ ಹಾಗೂ ಶೈಕ್ಷಣಿಕ ಗುಟ್ಟಮಟ್ಟದ ಬಗ್ಗೆ ಅಲ್ಲಿನ ಪ್ರಾಂಶುಪಾಲ ಸಂತೋಷ್ ಅವರಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಶೌಚಗೃಹ ಹಾಗೂ ವಸತಿ ಶಾಲೆಯಲ್ಲಿ ನೈರ್ಮಲ್ಯ ಶುಚಿತ್ವಕ್ಕೆ ಹೆಚ್ಚು ಆಧ್ಯತೆ ನೀಡುವಂತೆ ಸೂಚಿಸಿದರು. ಬಳಿಕ ಚಿಕ್ಕಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಶಿವಪ್ಪ, ವಿದ್ಯಾರ್ಥಿಗಳ ಸಂಖ್ಯೆ ಶುಚಿತ್ವ ಹಾಜರಾತಿ ಮತ್ತು ಊಟ ತಿಂಡಿಯ ಗುಣಮಟ್ಟ ಶುಚಿತ್ವ ವಿದ್ಯುತ್ ದ್ವೀಪದ ಬೆಳಕು, ವಿದ್ಯಾರ್ಥಿಗಳ ರಕ್ಷಣೆ ಕುರಿತು ಅಲ್ಲಿನ ಪ್ರಾಂಶುಪಾಲ ಲಿಂಗೇಶ್ ಹಾಗೂ ವಾರ್ಡನ್ ಶಿವಕುಮಾರ್ ಅವರಿಂದ ವಿವರ ಪಡೆದು ಸರ್ಕಾರದ ಸೌಲಭ್ಯ ವಿದ್ಯಾರ್ಥಿಗಳಿಗೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತೆ ಆದೇಶಿಸಿದರು.ಇಲ್ಲಿಂದ ವಾಪಸ್ಸಾದ ಉಪವಿಭಾಗಧಿಕಾರಿ ವೈ.ಎನ್.ಹೊಸಕೋಟೆ ನಾಡಕಚೇರಿಗೆ ಭೇಟಿ ನೀಡಿ, ರೈತ ಪರ ಸಮಸ್ಯೆ ಅರ್ಜಿ ಸಲ್ಲಿಕೆ ವಿಲೇವಾರಿ ಅರ್ಜಿಗಳ ವಿವರ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಪಹಣಿ ಹಾಗೂ ಇತರೆ ಜಮೀನು ದಾಖಲಾತಿಗಳ ವಿಲೇವಾರಿ ಸೇರಿದಂತೆ ರೈತ ಹಾಗೂ ಜನಸಾಮಾನ್ಯರಿಗೆ ತೊಂದರೆ ಅಗದ ರೀತಿಯಲ್ಲಿ ನಾಡಕಚೇರಿಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.ಈ ವೇಳೆ ಸುದ್ದಿಗಾರರ ಜತೆ ಎಸಿ ಶಿವಪ್ಪ ಮಾತನಾಡಿ, ತಾಲೂಕಿನ ದೊಡ್ಡಹಳ್ಳಿ ಚಿಕ್ಕಹಳ್ಳಿಯ ವಸತಿ ಶಾಲೆಗಳಿಗೆ ಭೇಟಿ ನೀಡಿದ್ದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದೇವೆ. ಸಮವಸ್ತ್ರ ವಿತರಣೆ, ಸರ್ಕಾರದ ಸೌಲಭ್ಯ ಹಾಗೂ ಶೈಕ್ಷಣಿಕ ಗುಣಮಟ್ಟ ಕುರಿತು ಪರಿಶೀಲನೆ ನಡೆಸಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತೆ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದರು. ದೇ ರೀತಿ ತಾಲೂಕಿನ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ ಹಾಸ್ಟೆಲ್‌ಗಳು ಸುಧಾರಣೆ ಕಾಣಬಹುದೆಂದು ಎಸಿಗೆ ಇಲ್ಲಿನ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ವೇಳೆ ವೈ.ಎನ್.ಹೊಸಕೋಟೆ ಹೋಬಳಿಯ ಕಂದಾಯ ನಿರೀಕ್ಷಕ (ಆರ್‌ಐ) ಕಿರಣ್‌ಕುಮಾರ್ ಇದ್ದರು.