ಚಿಮ್ಮಡ ಜಿಎಲ್ಬಿಸಿ ಕಾಲುವೆಗೆ ಎಸಿ ಸಂತೋಷ ಕಾಮಗೊಂಡ ಭೇಟಿ

| Published : Feb 25 2024, 01:46 AM IST

ಚಿಮ್ಮಡ ಜಿಎಲ್ಬಿಸಿ ಕಾಲುವೆಗೆ ಎಸಿ ಸಂತೋಷ ಕಾಮಗೊಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಘಟಪ್ರಭಾ ಎಡದಂಡೆ ಕಾಲುವೆಯ ನಿಯಂತ್ರಣ ಕಚೇರಿಗೆ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಚಿಮ್ಮಡ ಗ್ರಾಮದಲ್ಲಿ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆಯ ನಿಯಂತ್ರಣ ಕಚೇರಿಗೆ ಎಸಿ ಸಂತೋಷ ಕಾಮಗೊಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಜಿಎಲ್ಬಿಸಿ ಕಾಲುವೆಗೆ ಈ ಭಾಗದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹತ್ತು ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಈಗಾಗಲೇ ಐದು ದಿನ ಪೂರ್ಣಗೊಂಡಿದೆ. ಆದರೆ ಇದುವರೆಗೆ ಬೀಳಗಿ ಭಾಗದ ಬಹುತೇಕ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಗ್ರಾಮದ ನಿಯಂತ್ರಣ ಕಚೇರಿಗೆ ಖುದ್ದು ಭೇಟಿ ನೀಡಿ ರಾತ್ರಿ 11-30ರವರೆಗೆ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸಲಾಗಿ ಮಧುರಖಂಡಿ ಭಾಗದ ಹಲವು ರೈತರು ಜಮಖಂಡಿ ಕಾಲುವೆಗೆ ಹೆಚ್ಚುವರಿ ನೀರು ಹರಿಸುವಂತೆ ಸ್ಥಳೀಯ ನಿಯಂತ್ರಕರಿಗೆ ಒತ್ತಡಹಾಕಿ ನೀರು ಹರಿಸುತ್ತಿದ್ದರು ಹಾಗೂ ಮುಧೋಳ ಭಾಗದ ರೈತರು ಉಪ ಕಾಲುವೆಗಳ ಗೇಟ್‌ ಗಳನ್ನು ಒಡೆದು ನೀರನ್ನು ಜಮೀನುಗಳಿಗೆ ಹರಿಸುತ್ತಿರುವುದರಿಂದ ಬೀಳಗಿ ಭಾಗಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಮುಧೋಳ ಪ್ರಭಾರಿ ಕಾರ್ಯ ನಿರ್ವಾಹಕ ಅಭಿಯಂತರ ಎಚ್.ಆರ್. ಮಹಾರಡ್ಡಿ ಮಾಹಿತಿ ನೀಡಿದರು.

ಕುಡಿಯುವ ಉದ್ದೇಶಕ್ಕೆ ಅವಶ್ಯವಿರುವಷ್ಟು ನೀರನ್ನು ಮಾತ್ರ ಮುಧೋಳ ಹಾಗೂ ಜಮಖಂಡಿ ಕಾಲುವೆಗೆ ಹರಿಸುವಂತೆ ಆದೇಶಿಸಿದರು. ಗೇಟ್‌ಗಳನ್ನು ಒಡೆದು ಇಲಾಖೆ ಆಸ್ತಿಗಳಿಗೆ ಹಾನಿ ಮಾಡುವವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸುವಂತೆ ಜಮಖಂಡಿ, ಮುಧೋಳ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಆದೇಶಿಸಿದರು. ಹೆಚ್ಚುವರಿಯಾಗಿ ನೀರು ಪಡೆಯಲು ಬಂದಿದ್ದ ರೈತರಿಗೆ ತಿಳಿವಳಿಕೆ ನೀಡಿ ಕಳುಹಿಸಿದರು.

ಸ್ಥಳದಲ್ಲಿ ಜಮಖಂಡಿ ಕಾರ್ಯ ನಿರ್ವಾಹಕ ಅಭಿಯಂತರ ಶ್ರೀಶೈಲ ಕಲ್ಯಾಣಿ, ಮುಧೋಳ ಪ್ರಭಾರಿ ಕಾರ್ಯ ನಿರ್ವಾಹಕ ಅಭಿಯಂತರ ಎಚ್.ಆರ್. ಮಹಾರಡ್ಡಿ, ಸಹಾಯಕ ಕಾರ್ಯಪಾಲಕ ಚೇತನ ಅಬ್ಬಿಗೇರಿ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಸದಾಶಿವ ಕುಂಬಾರ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.