ಸಾರಾಂಶ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಿಕೇರಿ ವಿಭಾಗದ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಮಡಿಕೇರಿ ಸ್ಥಳೀಯ ಸಂಸ್ಥೆ ಮಟ್ಟದ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ನಡೆಯಿತು.
ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆಕನ್ನಡಪ್ರಭ ವಾರ್ತೆ ಮಡಿಕೇರಿ
ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಶೈಕ್ಷಣಿಕ ಗುರಿ ಸಾಧಿಸಬೇಕು ಎಂದು ಸಮಾಜ ಸೇವಕಿ ಜಯಂತಿ ಶೆಟ್ಟಿ ಕರೆ ನೀಡಿದ್ದಾರೆ.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಿಕೇರಿ ವಿಭಾಗದ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ ಮಡಿಕೇರಿ ಸ್ಥಳೀಯ ಸಂಸ್ಥೆ ಮಟ್ಟದ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎನ್‌ಸಿಸಿ, ಕ್ರೀಡೆ ಮತ್ತಿತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸುತ್ತದೆ. ಇಲ್ಲಿ ರೂಢಿಸಿಕೊಂಡ ಶಿಸ್ತು ಮುಂದೆ ಉತ್ತಮ ಜೀವನಕ್ಕೆ ಸಹಕಾರಿಯಾಗಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಲವು ಸರ್ಕಾರಿ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ನಾನು ಕೂಡ ಸ್ಕೌಟ್ಸ್ ಮತ್ತು ಗೈಡ್ಸ್‌ನ ಭಾಗವಾಗಿರಲು ಇಚ್ಛಿಸುತ್ತೇನೆ ಎಂದರು.ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದ ಜಯಂತಿ ಶೆಟ್ಟಿ, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಈ ರೀತಿಯ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ದೇಶಭಕ್ತಿ ಗಾಯನದ ಮೂಲಕ ಅವರು ವಿದ್ಯಾರ್ಥಿಗಳ ಗಮನ ಸೆಳೆದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ದೇಶಭಕ್ತಿ, ಶಿಸ್ತು ಮತ್ತು ಜಾತಿ ಮತ ಭೇದವಿಲ್ಲದ ಒಗ್ಗಟ್ಟಿನ ಜೀವನದ ಪಾಠವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಹೇಳಿಕೊಡುತ್ತದೆ. ಈ ಸಂಸ್ಥೆಯ ಭಾಗವಾಗಿರುವ ಎಲ್ಲ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಿಕೇರಿಯ ಅಧ್ಯಕ್ಷ ಈರಮಂಡ ಹರಿಣಿ ವಿಜಯ್, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶದ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ದೇಶಾಭಿನದೊಂದಿಗೆ ಗುರಿ ಸಾಧಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಇಂದು ದೇಶಭಕ್ತಿ ಗಾಯನದ ಮೂಲಕ ವಿದ್ಯಾರ್ಥಿಗಳು ತಮ್ಮ ದೇಶಾಭಿಮಾನವನ್ನು ಮೆರೆದಿದ್ದಾರೆ. ಈ ರೀತಿಯ ದೇಶಭಕ್ತಿಯ ಮತ್ತು ಪ್ರತಿಭಾನ್ವೇಷಣೆಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಗಾಯನ ಸ್ಪರ್ಧಾ ವಿಜೇತರು:ಸ್ಕೌಟ್ಸ್ ವಿಭಾಗದಲ್ಲಿ ಸಂತ ಮೈಕಲರ ಶಾಲೆ ಪ್ರಥಮ, ಸಂತ ಜೋಸೆಫರ ಶಾಲೆ ದ್ವಿತೀಯ, ಗೈಡ್ಸ್ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ‘ಬಿ’ ತಂಡ ಪ್ರಥಮ, ಸಂತ ಮೈಕಲರ ಶಾಲೆಯ ಇಂಗ್ಲಿಷ್ ಮಾಧ್ಯಮ ವಿಭಾಗ ದ್ವಿತೀಯ, ಬುಲ್ ಬುಲ್ ವಿಭಾಗದಲ್ಲಿ ಸಂತ ಜೋಸೆಫರ ಶಾಲೆ ಪ್ರಥಮ ಬಹುಮಾನ ಗಳಿಸಿತು.ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಿಕೇರಿಯ ಉಪಾಧ್ಯಕ್ಷೆ ನೀಲಮ್ಮ ಎನ್.ಯು. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ನಿರೂಪಿಸಿ, ವಂದಿಸಿದರು. ತೀರ್ಪುಗಾರರಾಗಿ ಹಿರಿಯ ಕಲಾವಿದೆ ಹಾಗೂ ಸಾಹಿತಿ ಶೋಭಾ ಸುಬ್ಬಯ್ಯ, ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಗಾಯಕಿ ಪ್ರೇಮ ಕೃಷ್ಣಪ್ಪ ಕಾರ್ಯ ನಿರ್ವಹಿಸಿದರು. ಸಂಸ್ಥೆಯ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ, ಜಿಲ್ಲಾ ತರಬೇತಿ ಆಯುಕ್ತರಾದ ರಂಜಿತ್ ಕೆ.ಯು, ಮೈಥಿಲಿ ರಾವ್, ಸಹಾಯಕ ಆಯುಕ್ತರಾದ ಸುಲೋಚನ, ಖಜಾಂಚಿ ಎಂ.ಎಸ್.ಶಾಂತಿ, ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಕಾರ್ಯದರ್ಶಿಗಳಾದ ವಸಂತಿ, ನಳಿನಿ ಸುವರ್ಣ, ಸಹ ಕಾರ್ಯದರ್ಶಿಗಳಾದ ಬೊಳ್ಳಜಿರ ಬಿ.ಅಯ್ಯಪ್ಪ, ಸುಚಿತ ಕಾವೇರಪ್ಪ, ಸದಸ್ಯರಾದ ಗುಲ್ಶನ್, ಸೂರಜ್ ತಿಮ್ಮಯ್ಯ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.