ಮಲೆನಾಡಲ್ಲಿ ಚುರುಕುಗೊಂಡ ಮುಂಗಾರು: ನದಿಗಳಿಗೆ ಜೀವಕಳೆ

| Published : Jun 10 2024, 12:32 AM IST

ಸಾರಾಂಶ

ಚಿಕ್ಕಮಗಳೂರು, ಪಶ್ಚಿಮಘಟ್ಟದ ತಪ್ಪಲಲ್ಲಿರುವ ಚಿಕ್ಕಮಗಳೂರು ಪಂಚನದಿಗಳ ತವರೂರು. ಮಲೆನಾಡು ಮತ್ತು ಮಳೆಗೂ ಬಿಡಿಸಲಾರದ ನಂಟಿದೆ. ಇಲ್ಲಿನ ಬೆಟ್ಟಗಳು, ಕಾಡು, ನದಿ, ಹಳ್ಳ, ಝರಿಗಳಿಗೆ ಜೀವ ಕಳೆ ಬರಬೇಕಾದರೆ ಮಳೆ ಸಿಂಚನವಾಗಲೇಬೇಕು. ಅದಕ್ಕಾಗಿ ಇವುಗಳು ಹಾತೋರೆಯುತ್ತವೆ. ಚಳಿಗಾಲದಲ್ಲಿ ಮುದುಡಿದ ಪ್ರಕೃತಿಯ ಮಡಿಲಿಗೆ ಮಳೆ ಹಾನಿಗಳು ಸ್ಪರ್ಶಿಸುತ್ತಿದ್ದಂತೆ ಬೆಟ್ಟಗಳು ಹಸಿರಾಗುತ್ತವೆ. ಗಿಡ ಮರಗಳು ಚಿಗುರುತ್ತವೆ, ನದಿಗಳ ಒಡಲು ಭರ್ತಿಯಾಗುತ್ತದೆ. ಕಣ್ಮರೆಯಾಗಿದ್ದ ಝರಿಗಳು ಪುನರ್‌ ಜನ್ಮ ಪಡೆಯುತ್ತವೆ. ಸ್ವರೂಪ ಕಳೆದುಕೊಂಡಿದ್ದ ಹಳ್ಳಗಳು ಕಣ್ಣಿಗೆ ಗೋಚರಿಸುತ್ತವೆ.

ದಿನೇ ದಿನೇ ಏರುತ್ತಿದೆ ನೀರಿನ ಮಟ್ಟ । ಮರುಕಳಿಸುತ್ತಿದೆ ಮುಂಗಾರು ಮಳೆಯ ವೈಭವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಶ್ಚಿಮಘಟ್ಟದ ತಪ್ಪಲಲ್ಲಿರುವ ಚಿಕ್ಕಮಗಳೂರು ಪಂಚನದಿಗಳ ತವರೂರು. ಮಲೆನಾಡು ಮತ್ತು ಮಳೆಗೂ ಬಿಡಿಸಲಾರದ ನಂಟಿದೆ. ಇಲ್ಲಿನ ಬೆಟ್ಟಗಳು, ಕಾಡು, ನದಿ, ಹಳ್ಳ, ಝರಿಗಳಿಗೆ ಜೀವ ಕಳೆ ಬರಬೇಕಾದರೆ ಮಳೆ ಸಿಂಚನವಾಗಲೇಬೇಕು. ಅದಕ್ಕಾಗಿ ಇವುಗಳು ಹಾತೋರೆಯುತ್ತವೆ. ಚಳಿಗಾಲದಲ್ಲಿ ಮುದುಡಿದ ಪ್ರಕೃತಿಯ ಮಡಿಲಿಗೆ ಮಳೆ ಹಾನಿಗಳು ಸ್ಪರ್ಶಿಸುತ್ತಿದ್ದಂತೆ ಬೆಟ್ಟಗಳು ಹಸಿರಾಗುತ್ತವೆ. ಗಿಡ ಮರಗಳು ಚಿಗುರುತ್ತವೆ, ನದಿಗಳ ಒಡಲು ಭರ್ತಿಯಾಗುತ್ತದೆ. ಕಣ್ಮರೆಯಾಗಿದ್ದ ಝರಿಗಳು ಪುನರ್‌ ಜನ್ಮ ಪಡೆಯುತ್ತವೆ. ಸ್ವರೂಪ ಕಳೆದುಕೊಂಡಿದ್ದ ಹಳ್ಳಗಳು ಕಣ್ಣಿಗೆ ಗೋಚರಿಸುತ್ತವೆ.

ಈ ರೀತಿಯ ಚಿತ್ರಣ ಮಲೆನಾಡಿನಲ್ಲಿ ನಿಧಾನವಾಗಿ ಕಾಣಿಸಿಕೊಳ್ಳುತ್ತಿದೆ. ಶೃಂಗೇರಿ, ಕೊಪ್ಪ, ಕಳಸ, ಎನ್‌.ಆರ್‌.ಪುರ ತಾಲೂಕುಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದರಿಂದ ತುಂಗಾ, ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಬತ್ತಿದ ನದಿಯ ಒಡಲು ಭರ್ತಿಯಾಗಿದೆ. ಮೂಡಿಗೆರೆ ತಾಲೂಕಿ ನಲ್ಲಿ ಮಳೆ ಬರುತ್ತಿರುವುದರಿಂದ ಹೇಮಾವತಿ ನದಿ ನೀರು ಕೂಡ ಹೆಚ್ಚಳವಾಗಿದೆ.

ಭದ್ರಾ ಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದರಿಂದ ಭಾನುವಾರ ಭದ್ರಾ ಜಲಾಶಯದ ಒಳ ಹರಿವು 549 ಕ್ಯುಸೆಕ್‌ ಇತ್ತು. ಹೊರ ಹರಿವು 341 ಕ್ಯುಸೆಕ್‌ ದಾಖಲಾಗಿತ್ತು. ಕಳೆದ ಮೂರು ದಿನಗಳಿಂದ ಶೃಂಗೇರಿ ತಾಲೂಕಿನಲ್ಲಿ ನಿರಂತರ ಮಳೆ ಬರುತ್ತಿದೆ. ಹಾಗಾಗಿ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ತುಂಗಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಳವಾಗಲಿದೆ.ಮುಂದುವರಿದ ಮಳೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಭಾನುವಾರವೂ ಚುರುಕುಗೊಂಡಿತ್ತು. ತರೀಕೆರೆಯಲ್ಲಿ ಬೆಳಿಗ್ಗೆ 10.30ರ ವೇಳೆಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ನಂತರ ಬಿಡುವು ಕೊಟ್ಟು ಆಗಾಗ ಬಂದು ಹೋಗುತ್ತಿತ್ತು. ಆದರೆ, ಕಡೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

ಚಿಕ್ಕಮಗಳೂರು ತಾಲೂಕಿನಲ್ಲಿ ಶನಿವಾರ ಇಡೀ ರಾತ್ರಿ ಮಳೆ ಬಂದಿತು. ಭಾನುವಾರ ಬೆಳಿಗ್ಗೆ ಮಳೆಯ ಅಬ್ಬರ ಕಡಿಮೆಯಾಗಿತ್ತಾದರೂ ತುಂತುರು ಮಳೆ, ಮೋಡ ಕವಿದ ವಾತಾವರಣ ಎಂದಿನಂತೆ ಇತ್ತು. ಕೊಪ್ಪ, ಶೃಂಗೇರಿ, ಮೂಡಿಗೆರೆ ಹಾಗೂ ಎನ್.ಆರ್‌.ಪುರ ತಾಲೂಕುಗಳಲ್ಲಿ ಮಳೆ ಮುಂದುವರೆದಿದೆ. ಮಳೆಯ ವಿವರ:

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆ ವಿವರ.

ಮೂಡಿಗೆರೆ 31.4 ಮಿ.ಮೀ., ಕೊಟ್ಟಿಗೆಹಾರ 84, ಗೋಣಿಬೀಡು 13.3, ಜಾವಳಿ 76.5, ಬಾಳೂರು 40.2, ಅಜ್ಜಂಪುರ 3.8, ಕೊಪ್ಪ 48, ಹರಿಹರಪುರ 31.6, ಜಯಪುರ 48.6, ಬಸರೀಕಟ್ಟೆ 51.2, ಕಮ್ಮರಡಿ 35.4, ಎನ್‌.ಆರ್‌.ಪುರ 11.8, ಬಾಳೆಹೊನ್ನೂರು 49, ಮೇಗರಾಮಕ್ಕಿ 29, ಚಿಕ್ಕಮಗಳೂರು 13.3, ಜೋಳ್ದಾಳ್‌ 23, ಆಲ್ದೂರು 30, ಕೆ.ಆರ್‌.ಪೇಟೆ 22, ಅತ್ತಿಗುಂಡಿ 18, ಮಳಲೂರು 20.2, ದಾಸರಹಳ್ಳಿ 36, ಶೃಂಗೇರಿ 58.6, ಕಿಗ್ಗಾ 77.4 ಹಾಗೂ ಕೆರೆಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ 146.2 ಮಿ.ಮೀ. ಮಳೆ ಬಂದಿದೆ.

ಪೋಟೋ ಫೈಲ್‌ ನೇಮ್‌ 9 ಕೆಸಿಕೆಎಂ 4ಶೃಂಗೇರಿಯಲ್ಲಿ ಹರಿಯುತ್ತಿರುವ ತುಂಗಾ ನದಿಯ ನೀರಿನ ಮಟ್ಟದಲ್ಲಿ ಭಾನುವಾರ ಏರಿಕೆಯಾಗಿತ್ತು.