ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮ್ಯೆದಾನದಲ್ಲಿ ಬೊಂಬೆ ನಾಡ ಗಂಗೋತ್ಸವದ ಪ್ರಯುಕ್ತ ಆಯೋಜಿಸಿರುವ ತಾಲೂಕು ಮಟ್ಟದ ಸಾಂಸ್ಕೃತಿಕ, ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕ್ರೀಡೆಗಳಲ್ಲಿ ಸೋಲು- ಗೆಲುವು ಸಾಮಾನ್ಯವಾಗಿದ್ದು, ಕ್ರೀಡಾಪಟುಗಳು ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮ್ಯೆದಾನದಲ್ಲಿ ಬೊಂಬೆ ನಾಡ ಗಂಗೋತ್ಸವದ ಪ್ರಯುಕ್ತ ಆಯೋಜಿಸಿರುವ ತಾಲೂಕು ಮಟ್ಟದ ಸಾಂಸ್ಕೃತಿಕ, ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ಪ್ರಥಮ ಬಾರಿಗೆ ಚನ್ನಪ್ಟಟಣದಲ್ಲಿ ಬೊಂಬೆನಾಡ ಗಂಗೋತ್ಸವ ಆಯೋಜಿಸಿದ್ದು, ಕಬ್ಬಡಿ, ವಾಲಿಬಾಲ್, ಫುಟ್‌ಬಾಲ್, ಯೋಗಾಸನ, ರಂಗಗೀತೆ, ಮ್ಯಾರಾಥಾನ್, ವಿಜ್ಞಾನ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾಲೂಕಿನ ಜನರಿಗೆ ಅವಕಾಶ ಕಲ್ಪಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಎಂದರು.

ತಾಲೂಕಿನ ಜನರಿಗೆ ತಮ್ಮಲ್ಲಿರುವ ಕ್ರೀಡೆ, ಸಾಂಸ್ಕೃತಿಕ ಪ್ರತಿಭೆಗಳನ್ನು ಹೊರಹೊಮ್ಮಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ, ಇಲ್ಲಿ ಜಯಗಳಿಸಿದವರು ಕನಕೋತ್ಸವದಲ್ಲಿ ಭಾಗಿಯಾಗುವ ಅವಕಾಶ ಪಡೆಯಲಿದ್ದಾರೆ ಎಂದರು.

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಪೂರಕ. ಯಾವುದೇ ಕ್ರೀಡೆ ಇರಲಿ ಅದರಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು.

ಈಗಾಗಲೇ ಮ್ಯೆದಾನದಲ್ಲಿ ಷಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಕೆಲ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದ್ದು, ತಮ್ಮ ತಮ್ಮ ತಂಡಗಳನ್ನು ನೋಂದಾಯಿಸಿ ಭಾಗವಹಿಸಿ ಎಂದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಎಸ್.ರವಿ, ಬೊಂಬೆನಾಡ ಗಂಗೋತ್ಸವ ಸಂಚಾಲಕ ದುಂತೂರು ವಿಶ್ವನಾಥ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಅಕ್ಕೂರು ಶೇಖರ್, ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್ ಕುಮಾರ್, ಮುಖಂಡರಾದ ಮಲವೇಗೌಡ, ಮುದ್ದುಕೃಷ್ಣ, ಕೋಕಿಲರಾಣಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.