ಸೋಲನ್ನು ಗೆಲುವಿನಂತೆ ಸಮಾನವಾಗಿ ಸ್ವೀಕರಿಸಿ

| Published : Nov 21 2025, 02:00 AM IST

ಸಾರಾಂಶ

ಕ್ರೀಡಾ ಮನೋಭಾವದ ಸೋಲು-ಗೆಲುವುಗಳನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಎಷ್ಟು ಕೆಲಸ, ಕಾರ್ಯಗಳನ್ನು ಮಾಡುತ್ತೇವೆ.

ಧಾರವಾಡ:

ಪೊಲೀಸರಿಗೆ ಪ್ರತಿದಿನವೂ ಒತ್ತಡಭರಿತ ಪರಿಸ್ಥಿತಿಗಳನ್ನು ನಿರ್ವಹಿಸುವುದು ಸಾಮಾನ್ಯ. ಇಂತಹ ಒತ್ತಡವನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಕ್ರೀಡೆ, ವ್ಯಾಯಾಮ ಸೇರಿವೆ. ಕ್ರೀಡೆಗಳು ಪ್ರತಿದಿನ ಮನಸ್ಸಿಗೆ ಹೊಸ ಚೈತನ್ಯ ಮತ್ತು ಸಂತಸ ನೀಡುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಹೇಳಿದರು.

ಇಲ್ಲಿಯ ಪೊಲೀಸ್ ಹೆಡ್ ಕ್ವಾರ್ಟರ್ಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿದ ಅವರು, ಕ್ರೀಡಾ ಮನೋಭಾವದ ಸೋಲು-ಗೆಲುವುಗಳನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಎಷ್ಟು ಕೆಲಸ, ಕಾರ್ಯಗಳನ್ನು ಮಾಡುತ್ತೇವೆ. ಅದರಲ್ಲಿ ಪ್ರತಿಯೊಂದರಲ್ಲೂ ನಾವು ಗೆಲುವು ಕಾಣುವುದಿಲ್ಲ. ಕೆಲವು ಸಲ ಸೋಲನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸೋಲನ್ನು ಗೆಲುವಿನಂತೆ ಸಮಾನ ಮನೋಭಾವದಿಂದ ಸ್ವೀಕರಿಸಬೇಕು ಎಂದರು. ಪೊಲೀಸರು ದಿನದ ಬಹುತೇಕ ಸಮಯವನ್ನು ಇಲಾಖೆ ಕರ್ತವ್ಯ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಕಳೆಯುತ್ತಾರೆ. ಆದ್ದರಿಂದ ಈ ತರಹದ ಕ್ರೀಡೆಗಳು ಮನಸ್ಸಿಗೂ ವಿಶ್ರಾಂತಿ, ಹೊಸತನ ನೀಡುತ್ತವೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಭದ್ರಾ ತಂಡದ ನಾಯಕ ಆರ್.ಎಸ್.ಐ. ಗಿರೀಶ ಜುಂಜೂರಿ, ತುಂಗಾ ತಂಡದ ನಾಯಕಿ ಪಿಎಸೈ ನಿರ್ಮಲಾ ಜಂಬಗಿ, ಕೃಷ್ಣಾ ತಂಡದ ನಾಯಕ ಪಿಎಸೈ ಪ್ರವೀಣ ಕೋಟಿ, ವರದಾ ತಂಡದ ನಾಯಕ ಅಭಿಜೀತ್, ಕಾವೇರಿ ತಂಡದ ನಾಯಕಿ ಪಿಎಸ್‌ಐ ನೇತ್ರಾವತಿ ಪವಾರ, ಶಾಲ್ಮಲಾ ತಂಡದ ನಾಯಕ ನಿಸ್ತಂತು, ಪಿಎಸ್‌ಐ ಉಮೇಶ ಕಮತಿ ಸದಸ್ಯರೊಂದಿಗೆ ಆಕರ್ಷಕ ಪಥ ಸಂಚಲನ ನಡೆಸಿ, ಅತಿಥಿಗಳಿಗೆ ಗೌರವ ಸಲ್ಲಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪ್ರಾಸ್ತಾವಿಕ ಮಾತನಾಡಿದರು. ಆರ್‌ಎಸ್‌ಐಗಳಾದ ವೈ.ಎಂ. ದೊಡಮನಿ ಮತ್ತು ಎ.ಎಫ್. ಜಿಲ್ಲೇನವರ ನಿರೂಪಿಸಿದರು. ಡಿಎಸ್‌ಪಿ ಡಿ.ಎಸ್. ಧನಗರ ವಂದಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ, ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋದ ಮುಕ್ತೇದಾರ ಹಾಗೂ ನಿವೃತ್ತ ಡಿಸಿಪಿ ದೇವರಹೊಸುರ ಇದ್ದರು.