ಸಾರಾಂಶ
ದೂರು ಕೇಳಿಬರದಂತೆ ಕಚೇರಿ ಕೆಲಸ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ಮಡಿಕೇರಿ ಡಿವೈಎಸ್‌ಪಿ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ವಿಚಾರಗಳು ಲೋಕಾಯುಕ್ತರ ಗಮನಕ್ಕೆ ಬರುತ್ತಿದ್ದು, ದೂರುಗಳು ಕೇಳಿಬರದಂತೆ ಕಚೇರಿ ಕೆಲಸ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ಮಡಿಕೇರಿ ಡಿವೈಎಸ್‌ಪಿ ದಿನಕರ ಶೆಟ್ಟಿ ಅವರು ಎಚ್ಚರಿಸಿದ್ದಾರೆ. ನಗರದ ತಹಸೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಇರುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ಪ್ರತಿನಿತ್ಯ ಚಲನವಲನ ಬಗ್ಗೆ ದಾಖಲು ಮಾಡಬೇಕು ಎಂದು ನಿರ್ದೇಶನ ನೀಡಿದರು. ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಸಮಯ ಪಾಲನೆ ಅತೀ ಮುಖ್ಯ. ಆ ನಿಟ್ಟಿನಲ್ಲಿ ಚಲನವಲನ ವಹಿಯನ್ನು ಸರಿಯಾಗಿ ನಿರ್ವಹಿಸಬೇಕು. ರಜೆ ಪಡೆದಿದ್ದಲ್ಲಿ ರಜೆ ಅರ್ಜಿ ಕಚೇರಿಯಲ್ಲಿ ಇರಬೇಕು. ನಗದು ವಹಿ ಬರೆಯಬೇಕು. ಕಚೇರಿ ಕೆಲಸ ನಿರ್ವಹಣೆ ಸಂಬಂಧ ಸರಿಯಾಗಿ ಪಾಲನೆ ಅತೀ ಮುಖ್ಯ ಎಂದು ಸೂಚಿಸಿದರು. ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹಲವು ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು. ಶಾಲಾ ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆಗದಂತೆ ಸದಾ ನಿಗಾವಹಿಸಬೇಕು. ಯಾವುದೇ ಕಾರಣಕ್ಕೂ ಕರ್ತವ್ಯ ಲೋಪ ಮಾಡಬಾರದು. ಸರ್ಕಾರಿ ನೌಕರರು ಉತ್ತರಾದಾಯಿತ್ವ ಹೊಂದಿರಬೇಕು. ಯಾವುದನ್ನು ಲಘುವಾಗಿ ಪರಿಗಣಿಸದೆ ಸಾಕಷ್ಟು ಎಚ್ಚರಿಕೆಯಿಂದ ಗಂಭೀರವಾಗಿ ಸರ್ಕಾರಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ದಿನಕರ ಶೆಟ್ಟಿ ಅವರು ಸೂಚಿಸಿದರು. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ನಮ್ಮ ಮನೆಯ ಮಕ್ಕಳು ಎಂದು ತಿಳಿಯಬೇಕು. ಇತರರ ಬಗ್ಗೆ ಮಾನವೀಯತೆ ಇರಬೇಕು ಎಂದರು. ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು. ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ಇರಬೇಕು. ಸರ್ಕಾರದ ವ್ಯವಸ್ಥೆಯಲ್ಲಿ ಪರಿಪೂರ್ಣತೆ ಕಾಯ್ದುಕೊಳ್ಳಬೇಕು ಎಂದು ದಿನಕರ ಶೆಟ್ಟಿ ಅವರು ಹೇಳಿದರು. ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಬೇಕು. ಪ್ರತೀ ಕಚೇರಿಯಲ್ಲಿ ಸ್ವೀಕೃತಿ ಮತು ರವಾನೆ ವಹಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು. ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್ ಅವರು ಮಾತನಾಡಿ ಸರ್ಕಾರಿ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ವ್ಯಕ್ತಿಯ ವ್ಯಕ್ತಿತ್ವ ಮತ್ತು ಮನುಷ್ಯನ ಮನುಷತ್ವ ಇರಬೇಕು. ಸಾರ್ವಜನಿಕರ ಸೇವೆಗೆ ಬಂದಿರುವವರು ಇರುವ ಅವಕಾಶವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು ಎಂದರು. ಸಾರ್ವಜನಿಕರೊಬ್ಬರು ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ದೂರಿದರು. ತಹಸೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಣೀಂದ್ರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸ್ನೇಹ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಕಾರ್ಮಿಕ ಇಲಾಖೆಯ ತಾಲೂಕು ಅಧಿಕಾರಿ ಎಂ.ಎಂ.ಯತ್ನಟ್ಟಿ, ಹಿರಿಯ ಉಪ ನೋಂದಣಾಧಿಕಾರಿ ಸೌಮ್ಯಲತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿರಿಯ ಭೂ ವಿಜ್ಞಾನಿ ಲೋಯಲ್ ಮಿರಂಡ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ, ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರವೀಣ್, ಸೆಸ್ಕ್ ಎಇಇ ವಿನಯಕುಮಾರ್ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))