ಮಾದಾರ ಗುರುಪೀಠಕ್ಕೆ ನೂತನ ವಟು ಸ್ವೀಕಾರ

| Published : May 10 2024, 11:48 PM IST

ಸಾರಾಂಶ

ಚಿತ್ರದುರ್ಗದ ಮಾದಾರ ಗುರುಪೀಠದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಜಯಬಸವ ದೇವರನ್ನು ನೂತನ ವಟುವಾಗಿ ಸ್ವೀಕಾರ ಮಾಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗದ ಶಿವಶರಣ ಮಾದಾರ ಗುರುಪೀಠಕ್ಕೆ ನೂತನ ವಟು ಪ್ರವೇಶವಾಗಿದೆ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳ ನಂತರದ ಗುರಪೀಠಕ್ಕೆ ಎರಡನೇ ವಟು ಪ್ರವೇಶವಾಗಿದ್ದು ಶುಕ್ರವಾರ ಮುಂಜಾನೆ ಮಠದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಚೆನ್ನಯ್ಯ ಸ್ವಾಮೀಜಿ ನೂತನ ವಟುವನ್ನು ಮಠಕ್ಕೆ ಸ್ವೀಕಾರ ಮಾಡಿದರು. ಮಾದಾರ ಗುರುಪೀಠದ ಪ್ರವೇಶ ದ್ವಾರದ ಬಳಿ ಇರುವ ಬಸವಾದಿ ಶರಣರ ಧರ್ಮ ಸಂಸತ್ ಸಭಾ ಮಂಟಪದಲ್ಲಿ ವಟು ಸ್ವೀಕಾರ ಧಾರ್ಮಿಕ ಕಾರ್ಯಗಳು ನಡೆದವು. ನೂತನ ವಟುವಿಗೆ ನೆರೆದ್ದ ಮಠಾಧಿಪತಿಗಳು ಬಸವದೇವರು ಎಂದು ನಾಮಕರಣ ಮಾಡುವುದರ ಮೂಲಕ ಧಾರ್ಮಿಕ ಲೋಕಕ್ಕೆ ಪ್ರವೇಶ ನೀಡಿದರು.ವಟು ಸ್ವೀಕಾರ ಸಮಾರಂಭದಲ್ಲಿ ಲಿಂಗಧೀಕ್ಷೆ, ವಿಭೂತಿ ಧಾರಣೆ, ಲಿಂಗಧಾರಣೆ, ಹಸ್ತಮಸ್ತಕ ಸಂಯೋಜನೆ, ಪಾದಪೂಜೆ ಸೇರಿದಂತೆ ಬಸವ ತತ್ವದ ಪ್ರಕಾರ ಧಾರ್ಮಿಕ ವಿಧಿ ವಿಧಾನ ನೆರವೇರಿದವು.ಮಹಲಿಂಗಪೂರದ ಲಖನ್: ಮಾದಾರ ಚನ್ನಯ್ಯ ಗುರುಪೀಠಕ್ಕೆ ಸ್ವೀಕಾರ ಮಾಡಿರುವ ವಟು ಜಯಬಸವ ದೇವರ ಪೂರ್ವಾಶ್ರಮ ಬಾಗಲಕೋಟೆ ಜಿಲ್ಲೆ, ಮಹಾಲಿಂಗಪುರ ಗ್ರಾಮವಾಗಿದ್ದು, ಸವಿತಾ ಮತ್ತು ಮಹಾಲಿಂಗಪ್ಪ ದಂಪತಿಗಳ ಎರಡನೇ ಪುತ್ರ 9 ವರ್ಷದ ಲಖನ್‌ಗೆ ದೀಕ್ಷೆ ನೀಡಲಾಗಿದೆ. ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು. ಇದರಲ್ಲಿ ಎರಡನೇ ಮಗ ಲಖನ್‌ ಅವರನ್ನು ಮಠಕ್ಕೆ ನೀಡಲಾಗಿದೆ.

ಮಾದಾರ ಗುರುಪೀಠ ಪರಂಪರೆಗೆ ಎರಡನೇ ವಟುವಾಗಿ ಪ್ರವೇಶ ಪಡೆದ ಬಸವದೇವರು ಆಹ್ವಾನಕ್ಕೆ ಇಡೀ ಮಠ ಸಂಭ್ರದಲ್ಲಿ ಮುಳುಗಿತ್ತು. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮಿಜಿ, ಭಗಿರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ನಂದ ಮಸಂದ ಸ್ವಾಮಿಗಳು, ಚಿತ್ರದುರ್ಗದ ಶ್ರೀ ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ,ಕೊರಟಗೆರೆಯ ಮಹಾಲಿಂಗ ಸ್ವಾಮಿಗಳು, ರಾಣೆಬೆನ್ನೂರಿನ ಗಜದಂಡ ಸ್ವಾಮಿಗಳು, ಸಿದ್ಧಾರೂಢ ಆಶ್ರಮದ ಶ್ರೀ ಜಯದೇವ ಸ್ವಾಮಿಗಳು, ತಿಳುವಳ್ಳಿಯ ನಿರಂಜನಾಂದ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು, ಸತ್ಯಕ್ಕ ಜಯದೇವಿತಾಯಿ, ಪೂರ್ಣಾನಂದ ಸ್ವಾಮಿಗಳು ಹಾಜರಿದ್ದು ವಟು ಸ್ವೀಕಾರ ಕಾರ್ಯಕ್ರಮ ಸಾಕ್ಷೀಕರಿಸಿದರು.